ಉಡುಪಿ: ವಿಶ್ವಮಾನ್ಯತೆ ಪಡೆದ ಉಡುಪಿ ಜಿಲ್ಲೆಯ ಪಡುಬಿದ್ರೆ ಬ್ಲ್ಯೂ ಫ್ಯಾಗ್ ಬೀಚ್ ಅಭಿವೃದ್ಧಿಗೆ ತೊಡಗಿಸಿಕೊಂಡಿದ್ದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ ಬನವಾಸಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ.
ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯವರಾದ ಸೋಮಶೇಖರ ಅವರು ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ವಿಚಾರದಲ್ಲಿ ಬಹಳ ಶ್ರಮವಹಿಸಿ ಕೆಲಸ ಮಾಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರರನ್ನು ಅಗಲಿದ್ದಾರೆ. ಇದನ್ನೂ ಓದಿ: ಡಿ ಬಾಸ್ ಮನವಿಗೆ ಭರ್ಜರಿ ಪ್ರತಿಕ್ರಿಯೆ-2 ದಿನದಲ್ಲಿ 25 ಲಕ್ಷ ಸಂಗ್ರಹ
ನ. 24 ರಂದು ಉಡುಪಿ ಸಹಾಯಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದ ಇವರು, ಪಡುಬಿದ್ರೆ ಬೀಚ್‍ಗೆ ಬ್ಲೂ ಫ್ಲ್ಯಾಗ್ ಅಂತಾರಾಷ್ಟ್ರೀಯ ಮಾನ್ಯತೆ ಸಿಗುವಲ್ಲಿ ಶ್ರಮಿಸಿದ್ದರು. ಮಾನ್ಯತೆ ಕುರಿತಾದ ನಿಯಮಗಳ ಪಾಲನೆ ಕುರಿತಂತೆ ಕೆಲಸ ನಿರ್ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದ ಇವರು ಸೇವಾ ಮುಂಬಡ್ತಿ ಹೊಂದಿದ್ದರು. ಇವರು ಈ ಮೊದಲು ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ್ದರು. ಸೋಮಶೇಖರ್ ಬಹಳ ನಿಷ್ಟೆಯಿಂದ ಕೆಲಸ ಮಾಡುತ್ತಿದ್ದರು ಎಂದು ಉಡುಪಿ ಜಿಲ್ಲಾಡಳಿತ ಸಂತಾಪ ಸೂಚಿಸಿದೆ. ಇದನ್ನೂ ಓದಿ: ಗೂಗಲ್‍ಗೆ 1,948 ಕೋಟಿ ರೂ. ದಂಡ ಹಾಕಿದ ಫ್ರಾನ್ಸ್