– ಮಕ್ಕಳಿಗೆ, ವೃದ್ಧರಿಗಿಲ್ಲ ಪ್ರವೇಶ
ಮೈಸೂರು/ಚಾಮರಾಜನಗರ: ದೇವಸ್ಥಾನಗಳು ತೆರೆಯುತ್ತಿರುವ ಬೆನ್ನಲ್ಲೇ ಪ್ರವಾಸಿಗರಿಗೆ ಮತ್ತೊಂದು ಸಿಹಿ ಸುದ್ದಿ ಲಭ್ಯವಾಗಿದೆ. ಜೂನ್ 8ರಿಂದ ಮೈಸೂರು ಮೃಗಾಲಯ ಹಾಗೂ ಬಂಡೀಪುರ ಸಫಾರಿಯನ್ನು ಆರಂಭಿಸಲು ಅನುಮತಿ ನೀಡಿದ್ದು, ಈ ಕುರಿತು ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
Advertisement
Advertisement
ರಾಜ್ಯ ಸರ್ಕಾರ ಅನುಮತಿ ಸೂಚಿಸಿದ್ದು, ಇದಕ್ಕಾಗಿ ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ. ಈ ಹಿನ್ನೆಲೆ ಮೈಸೂರು ಮೃಗಾಲಯ ಹಾಗೂ ಬಂಡೀಪುರ ಸಫಾರಿ ಪುನರಾರಂಭಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ಎರಡೂ ಪ್ರವಾಸಿ ತಾಣಗಳಲ್ಲಿ ಸಿದ್ಧತೆ ಮಾಡಲಾಗುತ್ತಿದೆ. ಮೃಗಾಲಯದ ಒಳಭಾಗದಲ್ಲಿ ಸಾಮಾಜಿಕ ಅಂತರ, ಪ್ರತಿ ಕೀ ಪಾಯಿಂಟ್‍ನಲ್ಲಿ ಸ್ಯಾನಿಟೈಸ್, ಪ್ರವಾಸಿಗರ ಮಧ್ಯೆ 6 ಅಡಿ ಅಂತರ ಕಾಪಾಡುವುದು ಕಡ್ಡಾಯವಾಗಿದೆ.
Advertisement
Advertisement
ಗಂಟೆಗೆ ಒಂದು ಸಾವಿರ ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಒಂದು ಸಾವಿರಕ್ಕಿಂತ ಹೆಚ್ಚು ಜನರಿದ್ದರೆ, ಒಂದು ಗಂಟೆ ಬಳಿಕ ಮೃಗಾಲಯಕ್ಕೆ ಪ್ರವೇಶ ಮಾಡಬೇಕು. ಮೃಗಾಲಯದ ಒಳ ಬರುವಾಗ ಥರ್ಮಲ್ ಸ್ಕ್ರೀನಿಂಗ್‍ಗೆ ವ್ಯವಸ್ಥೆ ಮಾಡಲಾಗಿದೆ. ಆದರೆ 10 ವರ್ಷದೋಳಿನ ಮಕ್ಕಳು, 65 ವರ್ಷ ವೃದ್ಧರಿಗೆ ಮೃಗಾಲಯ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ನಿತ್ಯ 8 ಗಂಟೆಗಳ ಕಾಲ ಮೃಗಾಲಯ ವಿಕ್ಷಣೆಗೆ ಲಭ್ಯವಿರಲಿದೆ.
ಸೋಮವಾರ ಬೆಳಗ್ಗೆ 10ಕ್ಕೆ ಮೃಗಾಲಯ ತೆರೆಯಲಿದ್ದು, ಉಸ್ತುವಾರಿ ಸಚಿವರು, ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಮೃಗಾಲಯ ಪುನರಾರಂಭವಾಗಲಿದೆ. ಮಂಗಳವಾರದಿಂದ ಎಂದಿನಂತೆ ಬೆಳಗ್ಗೆ 8.30ಕ್ಕೆ ಆರಂಭವಾಗಲಿದೆ.
ಬಂಡೀಪುರ ಸಫಾರಿ ಆರಂಭ
ಕಳೆದ 85 ದಿನಗಳಿಂದ ಬಂದ್ ಆಗಿದ್ದ ಬಂಡೀಪುರ ಸಫಾರಿ ಸಹ ಪುರಾರಂಭವಾಗುತ್ತಿದೆ. ಜೂನ್ 8ರಿಂದ ಬಂಡೀಪುರ ಸಫಾರಿ ಆರಂಭವಾಗುವ ಸಾಧ್ಯತೆ ಇದೆ. ಈ ಮೂಲಕ ಪ್ರವಾಸಿಗರಿಗೆ ವನ್ಯಜೀವಿ ದರ್ಶನ ಭಾಗ್ಯ ಸಿಗಲಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‍ಟಿಸಿಎ) ಹಾಗೂ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಡ್ಡಾಯವಾಗಿದ್ದು, ಶೇ.50ರಷ್ಟು ಸೀಟುಗಳ ಭರ್ತಿಗೆ ಅನುಮತಿ ನೀಡಲಾಗಿದೆ. ಎಂಟು ಬಸ್, ಐದು ಜಿಪ್ಸಿ ವಾಹನ ಸಂಚಾರಕ್ಕೆ ಅನುಮತಿ ದೊರೆತಿದ್ದು, ಬಸ್ ಟಿಕೆಟ್ ದರ ಒಬ್ಬರಿಗೆ 350 ರೂ., ಒಂದು ಜಿಪ್ಸಿ ವಾಹನಕ್ಕೆ 3,500 ರೂ. ನಿಗದಿ ಮಾಡಲಾಗಿದೆ. ಲಾಕ್‍ಡೌನ್ ನಿಂದಾಗಿ ಸಫಾರಿ ಬಂದ್ ಆಗಿದ್ದಕ್ಕೆ ಮೂರುವರೆ ಕೋಟಿ ರೂ. ನಷ್ಟ ಸಂಭವಿಸಿದೆಯಂತೆ. ಇದೀಗ ಪುರಾರಂಭವಾಗುತ್ತಿದ್ದು, ಪ್ರವಾಸಿಗರು ಪ್ರಾಣಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.