ಹುಬ್ಬಳ್ಳಿ: ಲಾಕ್‍ಡೌನ್ ಬಹುತೇಕ ಸಡಿಲಿಗೊಳಿಸಿದ ಹಿನ್ನೆಲೆಯಲ್ಲಿ ಜನರ ಕೋವಿಡ್ ಪೂರ್ವ ಸ್ಥಿತಿಗೆ ಮರಳುತ್ತಿದ್ದು, ಇದರೊಂದಿಗೆ ಬಸ್ ಪ್ರಯಾಣಿಕರ ಸಂಖ್ಯೆಯೂ ಏರಿಕೆಯಾಗಿದೆ. ಕಳೆದ ತಿಂಗಳಿಗಿಂತ ಅಕ್ಟೋಬರ್ ನಲ್ಲಿ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗದ ಸಾರಿಗೆ ಆದಾಯ ಹೆಚ್ಚಾಗಿದ್ದು, ಮತ್ತಷ್ಟು ಮಾರ್ಗಗಳಲ್ಲಿ ಬಸ್ಸುಗಳನ್ನು ಹೆಚ್ಚಿಸಲಾಗಿದೆ.
ಲಾಕ್‍ಡೌನ್ ಪೂರ್ವದಲ್ಲಿ ಹುಬ್ಬಳ್ಳಿ ವಿಭಾಗದಲ್ಲಿ 419 ಬಸ್ಸುಗಳು ಪ್ರತಿದಿನ 1.63 ಲಕ್ಷ ಕಿ.ಮೀ ಸಂಚರಿಸುತ್ತಿದ್ದವು. 1.25 ಲಕ್ಷ ಜನರಿಂದ 1.35 ಲಕ್ಷ ಜನರು ಪ್ರತಿದಿನ ಪ್ರಯಾಣ ಮಾಡುತ್ತಿದ್ದರು. ಸಂಸ್ಥೆಗೆ ಸುಮಾರು 45 ರಿಂದ 50 ಲಕ್ಷ ರೂ. ಆದಾಯ ಸಂಗ್ರಹವಾಗುತ್ತಿತ್ತು. ಆಗಸ್ಟ್ ಅಂತ್ಯಕ್ಕೆ ಪ್ರತಿದಿನ 255 ಬಸ್ಸುಗಳು 60 ಸಾವಿರ ಕಿ.ಮೀ. ಸಂಚರಿಸುತ್ತಿದ್ದು, 30 ರಿಂದ 35 ಸಾವಿರ ಜನರು ಪ್ರಯಾಣ ಮಾಡುತ್ತಿದ್ದರು. ನಿತ್ಯ 16 ರಿಂದ 18 ಲಕ್ಷ ರೂ. ಆದಾಯ ಬರುತ್ತಿತ್ತು.
Advertisement
Advertisement
ಸೆಪ್ಟೆಂಬರ್ ಅಂತ್ಯಕ್ಕೆ ಪ್ರತಿದಿನ 325 ಬಸ್ಸುಗಳು 90 ಸಾವಿರ ಕಿ.ಮೀ ಸಂಚರಿಸುತ್ತಿದ್ದವು. 48 ರಿಂದ 50 ಸಾವಿರ ಜನರು ಪ್ರಯಾಣ ಮಾಡುತ್ತಿದ್ದರು. 22 ಲಕ್ಷ ರೂ. ಆದಾಯ ಬರುತ್ತಿತ್ತು. ಈಗ ನಿತ್ಯ 345 ರಿಂದ 350 ಬಸ್ಸುಗಳು 1.05 ರಿಂದ 1.10 ಲಕ್ಷ ಕಿ.ಮೀ. ಸಂಚರಿಸುತ್ತಿವೆ. 57 ರಿಂದ 59 ಸಾವಿರ ಜನರು ಪ್ರಯಾಣ ಮಾಡುತ್ತಿದ್ದಾರೆ. ನಿತ್ಯ 26 ರಿಂದ 28 ಲಕ್ಷ ರೂ. ಆದಾಯ ಬರುತ್ತಿದೆ.
Advertisement
ಲಾಕ್‍ಡೌನ್ ಪೂರ್ವದಲ್ಲಿ ಅಂತರ ರಾಜ್ಯಗಳಲ್ಲಿ ಸಂಚರಿಸುವ ಬಸ್ಸುಗಳಿಂದ ಅದರಲ್ಲೂ ಪ್ರಮುಖವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಸಂಚರಿಸುವ ಬಸ್ಸುಗಳಿಂದ ಹೆಚ್ಚಿನ ಆದಾಯ ಬರುತ್ತಿತ್ತು. ಲಾಕ್‍ಡೌನ್ ನಂತರದಲ್ಲಿ ಗೋವಾ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಸಂಚರಿಸುವ ಬಸ್ಸುಗಳಲ್ಲಿ ಉತ್ತಮ ಆದಾಯ ಬರುತ್ತಿದೆ. ಇತ್ತೀಚೆಗೆ ಸುರಿಯುತ್ತಿರುವ ಮಹಾ ಮಳೆ ಹಾಗೂ ನೆರೆಹಾವಳಿಯಿಂದಾಗಿ ಪ್ರಯಾಣಿಕರ ಸಂಖ್ಯೆ ಕೊಂಚ ಕಡಿಮೆಯಾಗಿದೆ.
Advertisement
ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಕೆಲವು ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಅತಿ ಕಡಿಮೆ ಇದ್ದು, ಸಂಸ್ಥೆಗೆ ಹೆಚ್ಚು ನಷ್ಟ ಉಂಟಾಗುತ್ತಿದೆ. ಆದರೆ ಈ ಪ್ರದೇಶಗಳಲ್ಲಿ ಹೆಚ್ಚಾಗಿರುವ ಬಡವರು ಹಾಗೂ ಮಧ್ಯಮ ವರ್ಗದ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಸಂಸ್ಥೆಯ ಬಸ್ಸುಗಳನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಸಾಮಾಜಿಕ ಬದ್ಧತೆಯ ದೃಷ್ಟಿಯಿಂದ ಈ ಬಸ್ಸುಗಳ ಕಾರ್ಯಚರಣೆಯನ್ನು ಮುಂದುವರಿಸಲಾಗುತ್ತಿದೆ.
ಇದೀಗ ಅಧಿಕಮಾಸ ಮುಕ್ತಾಯಗೊಂಡಿದೆ. ಧಾರ್ಮಿಕ ಕ್ಷೇತ್ರಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಮದುವೆ ಮತ್ತಿತರ ಶುಭ ಕಾರ್ಯಗಳು, ಸಭೆ, ಸಮಾರಂಭಗಳು ಮತ್ತೆ ಪ್ರಾರಂಭವಾಗಿವೆ. ದಸರಾ ಹಾಗೂ ದೀಪಾವಳಿ ಹಬ್ಬಗಳ ಸಂದರ್ಭಗಳಲ್ಲಿ ಹೆಚ್ಚಿನ ಪ್ರಯಾಣಿಕರ ಸಂಚಾರ ನಿರೀಕ್ಷಿಸಲಾಗಿದೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಾರಿಗೆ ಆದಾಯ ಉತ್ತಮಗೊಳ್ಳುವ ವಿಶ್ವಾಸವಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.