– ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಸಿಎಂ ಸಹಾಯ ಮಾಡಬೇಕು
– ಭದ್ರತೆ ನೀಡಿದರೆ ಅನ್ಯಾಯವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ
– ಈಗ ಬಂದು ಹೇಳಿಕೆ ನೀಡಲು ಭಯವಾಗುತ್ತಿದೆ
ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಣಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಪೋಷಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಹೇಳಿಕೆ ನೀಡಿದ್ದ ಬೆನ್ನಲ್ಲೇ ಇದೀಗ ಯುವತಿ 5ನೇ ವೀಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಪ್ರಭಾವ ಬೀರಿ ನಮ್ಮ ತಂದೆ, ತಾಯಿಯಿಂದ ಹೇಳಿಕೆ ಕೊಡಿಸಿದ್ದಾರೆ ಎಂದು ಸಿಡಿ ಲೇಡಿ ಆರೋಪಿಸಿದ್ದಾರೆ.
Advertisement
ವೀಡಿಯೋ ಹೇಳಿಕೆಯಲ್ಲಿ ಮಾತನಾಡಿರುವ ಸಿಡಿ ಲೇಡಿ, ಇಂದು ಆಗಿರುವ ಬೆಳವಣಿಗೆ ಕಂಡು ನನಗೆ ಭಯವಾಗುತ್ತಿದೆ. ನಮ್ಮ ಅಪ್ಪ, ಅಮ್ಮನಿಗೆ ಏನೂ ಗೊತ್ತೇ ಇಲ್ಲ. ಅವರ ಮೇಲೆ ಪ್ರಭಾವ ಬೀರಿ, ಬೆದರಿಕೆ ಹಾಕಿ, ಅವರನ್ನು ಎಲ್ಲೋ ಇರಿಸಿ, ಇಂದು ಹೊರಗಡೆ ಕರೆದುಕೊಂಡು ಬಂದು ಅವರ ಬಾಯಿಂದ ಏನೇನೋ ಹೇಳಿಸುತ್ತಿದ್ದಾರೆ. ಈ ಕೇಸಲ್ಲಿ ಅನ್ಯಾಯವಾಗಿರುವುದು ನನಗೆ, ಅನ್ಯಾಯ ಮಾಡಿರುವುದು ಅವರು. ಆದರೆ ಅವರ ಮನೆಯವರನ್ನು ಯಾಕೆ ಕರೆದುಕೊಂಡು ಬಂದು ವಿಚಾರಣೆ ಮಾಡುತ್ತಿಲ್ಲ ಎಂದು ರಮೇಶ್ ಜಾರಕಿಹೊಳಿ ಹೆಸರು ಹೇಳದೆ ಸಿಡಿ ಲೇಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ನಮ್ಮ ತಂದೆ, ತಾಯಿ ಬಾಯಿಂದ ಏನೇನೋ ಹೇಳಿಸಿ, ಪ್ರಕರಣವನ್ನೇ ಬೇರೆ ರೀತಿ ತಿರುಗಿಸುತ್ತಿದ್ದಾರೆ. ಇಲ್ಲಿ ನ್ಯಾಯ ಸಿಗಬೇಕಿರುವುದು ನನಗೆ, ಮೊದಲು ನನ್ನ ಬಗ್ಗೆ ಮಾತನಾಡಬೇಕು. ಅದನ್ನು ಬಿಟ್ಟು ಬೇರೆಯವರ ಬಗ್ಗೆ ಮಾತನಾಡುತ್ತಿದ್ದಾರೆ. ಇದು ನನಗೆ ಬೇಕಿಲ್ಲ ಅವೆಲ್ಲ ಅವರ ವೈಯಕ್ತಿಕ ವಿಚಾರ. ಈಗ ನಾನು ಬಂದು ಹೇಳಿಕೆ ನೀಡಬೇಕೆಂದರೂ ನನಗೆ ಭಯವಾಗುತ್ತಿದೆ ಎಂದು ಹೇಳಿದ್ದಾರೆ.
Advertisement
ಪ್ರಭಾವ ಬೀರಿ ನಮ್ಮ ಅಪ್ಪ, ಅಮ್ಮನ ಕಡೆಯಿಂದಲೇ ಏನೇನೋ ಹೇಳಿಸಿ, ಪ್ರಕರಣವನ್ನೇ ಬದಲಾಯಿಸಲು ನೋಡುತ್ತಿದ್ದಾರೆ. ಹೀಗಿರುವಾಗ ನಾನು ಅಲ್ಲಿಗೆ ಬಂದು ಹೇಳಿಕೆ ನೀಡಿದರೆ ಏನಾಗುತ್ತೋ ನನಗೆ ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಮೇಶ್ ಕುಮಾರ್ ಅವರ ಬಳಿ ಕೇಳಿಕೊಳ್ಳುವುದು ಇಷ್ಟೇ, ನನಗೆ ಸಹಾಯ ಮಾಡಿ. ಏನೇನು ಅನ್ಯಾಯ ಮಾಡಿದ್ದಾರೋ ಎಲ್ಲವನ್ನೂ ಎಳೆ ಎಳೆಯಾಗಿ ಎಲ್ಲರ ಮುಂದೆ ಬಿಚ್ಚಿಡುತ್ತೇನೆ ಎಂದು ತಿಳಿಸಿದ್ದಾರೆ.
ನಾನು ನ್ಯಾಯಾಧೀಶರ ಮುಂದೆಯೇ ಬಂದು ಹೇಳಿಕೆ ನೀಡುತ್ತೇನೆ. ದಯವಿಟ್ಟು ನನಗೆ ಎಲ್ಲರೂ ಸಹಾಯ ಮಾಡಿ, ಎಲ್ಲ ಮುಖಂಡರಲ್ಲೂ ನಾನು ಕೇಳಿಕೊಳ್ಳುವುದು ಇಷ್ಟೇ ಎಂದು ಸಿಡಿ ಯುವತಿ ತಮ್ಮ 5ನೇ ವೀಡಿಯೋ ಹೇಳಿಕೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.