ನವದೆಹಲಿ: ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಕೊರೋನಾ ಸ್ಫೋಟ, ಈ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಪ್ರಧಾನಿ ಮೋದಿ ಸಭೆ ನಡೆಯಲಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಉತ್ತರಪ್ರದೇಶ, ತಮಿಳುನಾಡು, ದೆಹಲಿ, ಪಂಜಾಬ್ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಸಮಾಲೋಚನೆ ಮಾಡಲಿದ್ದಾರೆ. ದೇಶದ ಒಟ್ಟು ಕೊರೊನಾ ಪ್ರಕರಣದಲ್ಲಿ 7 ರಾಜ್ಯಗಳಿಂದಲೇ ಶೇ.63ರಷ್ಟು ಪ್ರಕರಣಗಳು ದಾಖಲಾಗಿದೆ. ಆದ್ದರಿಂದ ಪ್ರಧಾನಿಗಳೊಂದಿಗೆ ನಡೆಯುವ ಸಭೆಯಲ್ಲಿ ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯಕ್ಕೆ ಸೂಚಿಸುವ ನಿರೀಕ್ಷೆ ಇದೆ.
ಕೊರೊನಾ ಆರಂಭ ಕಾಲದಲ್ಲಿ ಅತ್ಯುತ್ತಮವಾಗಿ ಸೋಂಕು ನಿಯಂತ್ರಣ ಮಾಡಲಾಗಿದೆ ಎಂದು ಖುದ್ದು ಪ್ರಧಾನಿ ಕರ್ನಾಟಕ ಸರ್ಕಾರವನ್ನು ಶ್ಲಾಘಿಸಿದ್ದರು. ಆದರೆ ಈಗ ಕರ್ನಾಟಕದಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಕೊರೊನಾ ಹಾಟ್‍ಸ್ಪಾಟ್ ರಾಜ್ಯಗಳ ಪೈಕಿ ನಮ್ಮ ರಾಜ್ಯವೂ ಒಂದು. ಸಭೆಯಲ್ಲಿ ಕರ್ನಾಟಕದಲ್ಲಿ ಕೊರೊನಾ ಸ್ಥಿತಿಗತಿ ಬಗ್ಗೆ ಪ್ರಧಾನಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ವಿವರಣೆ ನೀಡಲಿದ್ದಾರೆ. ಅಲ್ಲದೇ ಶಾಲಾ-ಕಾಲೇಜು, ಥಿಯೇಟರ್‌ಗಳನ್ನ ತೆರೆಯುವ ಬಗ್ಗೆಯೂ ಚರ್ಚೆ ಆಗುವ ನಿರೀಕ್ಷೆ ಇದೆ.
ಪ್ರಧಾನಿ ಮೋದಿ ಅವರು ಕೊರೊನಾ ಹತ್ತಿಕ್ಕುವ ಸಂಬಂಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸುವ ಸಂಭವ ಇದೆ. ಕ್ವಾರಂಟೈನ್, ಕೊರೊನಾ ಟೆಸ್ಟಿಂಗ್ ಬಗ್ಗೆ ಕಟ್ಟುನಿಟ್ಟಿನ ಆದೇಶ ನೀಡುವ ಸಂಭವ ಇದೆ. ಚಿತ್ರಮಂದಿರ, ಸ್ಕೂಲ್-ಕಾಲೇಜ್ ಓಪನ್ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.
ಇತ್ತ ರಾಜ್ಯದಲ್ಲಿ ಕೊರೋನಾ ಟೆಸ್ಟ್ ಗಳನ್ನು ಕಡಿಮೆ ಮಾಡಲಾದ ಕಾರಣ ನಿನ್ನೆ ಸೋಂಕಿತರ ಸಂಖ್ಯೆಯೂ ಕಡಿಮೆ ಆಗಿದೆ. ಇಂದು 55 ಸಾವಿರ ಟೆಸ್ಟ್ ನಡೆಸಿದ್ದು, ಇದರಲ್ಲಿ 6,974 ಮಂದಿಗೆ ಕೊರೊನಾ ಪಾಸಿಟೀವ್ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 5,33,850 ಆಗಿದೆ. ಇನ್ನು ಮೃತರ ಸಂಖ್ಯೆ ಎಂದಿಗಿಂತ ಇಳಿಮುಖವಾಗಿದ್ದು, 83 ಮಂದಿ ಕೊರೊನಾಗೆ ಇಂದು ಬಲಿ ಆಗಿದೆ. ಒಟ್ಟು ಮೃತರ ಸಂಖ್ಯೆ 8,228 ಕ್ಕೇರಿದೆ. ಸೋಂಕಿನಿಂದ ಚೇತರಿಕೆ ಪ್ರಮಾಣ ಹೆಚ್ಚಿದ್ದು, 9,073 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 93,153ಕ್ಕೆ ಇಳಿಮುಖವಾಗಿದೆ.