ನವದೆಹಲಿ: ಕೊರೊನಾ ನಿರ್ವಹಣೆ ಕುರಿತು ರಾಹುಲ್ ಗಾಂದಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದೀಗ ನವಿಲುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕಾಲ ಕಳೆಯುತ್ತಿದ್ದ ಫೋಟೋಗಳು ವೈರಲ್ ಆಗಿರುವ ಕುರಿತು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊರೊನಾ ಸಂಕಷ್ಟದಲ್ಲಿ ನಾವಿದ್ದೇವೆ. ಸೋಂಕಿತರ ಸಂಖ್ಯೆ ಈ ವಾರದಲ್ಲಿ 50 ಲಕ್ಷದ ಗಡಿ ದಾಟಲಿದೆ. ಆಕ್ಟಿವ್ ಪ್ರಕರಣಗಳ ಸಂಖ್ಯೆ ಸಹ 10 ಲಕ್ಷ ತಲುಪಲಿದೆ. ಒಬ್ಬ ಮನುಷ್ಯನ ಅಹಂನಿಂದಾಗಿ ಅನಿಯೋಜಿತ ಲಾಕ್‍ಡೌನ್ ಗಿಫ್ಟ್ ನೀಡಲಾಗಿದೆ. ಇದರಿಂದಾಗಿ ದೇಶಾದ್ಯಂತ ಕೊರೊನಾ ವೈರಸ್ ಹರಡಿದೆ ಎಂದು ಕಿಡಿಕಾರಿದ್ದಾರೆ.
ಮೋದಿ ಸರ್ಕಾರ ಆತ್ಮನಿರ್ಭರ ಭಾರತ ಎಂದು ಹೇಳುತ್ತದೆ. ಇದರರ್ಥ ನಿಮ್ಮ ಜೀವವನ್ನು ನಿವೇ ರಕ್ಷಿಸಿಕೊಳ್ಳಿ ಎಂಬುದು. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿ ನವಿಲುಗಳೊಂದಿಗೆ ಬ್ಯುಸಿಯಾಗಿದ್ದಾರೆ ಎಂದು ಹರಿಹಾಯ್ದಿದ್ದಾರೆ.
कोरोना संक्रमण के आँकड़े इस हफ़्ते 50 लाख और ऐक्टिव केस 10 लाख पार हो जाएँगे।
अनियोजित लॉकडाउन एक व्यक्ति के अहंकार की देन है जिससे कोरोना देशभर में फैल गया।
मोदी सरकार ने कहा आत्मनिर्भर बनिए यानि अपनी जान ख़ुद ही बचा लीजिए क्योंकि PM मोर के साथ व्यस्त हैं।
— Rahul Gandhi (@RahulGandhi) September 14, 2020
ಪ್ರಧಾನಿ ನರೇಂದ್ರ ಮೋದಿ ಲೋಕಕಲ್ಯಾಣ ಮಾರ್ಗದಲ್ಲಿನ ತಮ್ಮ ನಿವಾಸದಲ್ಲಿ ಕಳೆದ ತಿಂಗಳು ನವಿಲುಗಳಿಗೆ ಆಹಾರ ತಿನಿಸುತ್ತಿದ್ದ ಹಾಗೂ ವ್ಯಾಯಾಮ ಮಾಡುತ್ತಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು. ಪ್ರಧಾನಿ ಮೋದಿ ನವಿಲುಗಳೊಂದಿಗೆ ಕಾಲ ಕಳೆಯುವ ವಿಡಿಯೋ ಸಖತ್ ವೈರಲ್ ಆಗಿತ್ತು. ಇದನ್ನೇ ಉಲ್ಲೇಖಿಸಿ ರಾಹುಲ್ ಗಾಂಧಿ ಇದೀಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದಿನಿಂದ ಅಧಿವೇಶನ ಆರಂಭವಾಗಿದ್ದು, ರಾಹುಲ್ ಗಾಂಧಿ ಅಧಿವೇಶನದ ಮೊದಲ ಭಾಗದಲ್ಲಿ ಹಾಜರಾಗುತ್ತಿಲ್ಲ. ಸೋನಿಯಾ ಗಾಂಧಿಯವರ ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ತೆರಳಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ತಮ್ಮ ತಾಯಿಯ ಬಳಿ ತೆರುಳುವ ವರೆಗೆ ರಾಹುಲ್ ಗಾಂಧಿ ಭಾರತಕ್ಕೆ ಮರಳುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.