ಮಂಗಳೂರು: ರಾಜ್ಯಸಭೆಯಲ್ಲಿ ನಿನ್ನೆ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳ ಆಧುನೀಕರಣ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಮುಂದುವರಿಕೆ, 80 ಕೋಟಿ ಬಡವರಿಗೆ ಕಡಿಮೆ ದರದಲ್ಲಿ ಪಡಿತರ ವಿತರಣೆ ಮುಂದುವರಿಯುವುದು ಎಂದು ಹೇಳಿದ್ದಾರೆ. ಇದು ಅವರಿಗೆ ಬಡವರ ಮೇಲೆ ಇರುವ ಕಳಕಳಿಗೆ ಸ್ಪಷ್ಟ ಉದಾಹರಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈ ಕಾಯ್ದೆಗಳ ಅನುಷ್ಠಾನ ಅನಿವಾರ್ಯ ಎಂಬುದನ್ನು ಪ್ರತಿಭಟನಾಕಾರರಿಗೆ ಅರ್ಥ ಮಾಡಿಸಿ, ದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ. ಈ ವಿಚಾರದಲ್ಲಿ ವಿರೋಧ ಪಕ್ಷಗಳ ಸಹಕಾರ ಬೇಕಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಸಣ್ಣ ರೈತರ ಪರಿಸ್ಥಿತಿ ಸುಧಾರಣೆಗಾಗಿ ರಸಗೊಬ್ಬರ ಸರಿಯಾಗಿ ದೊರೆಯುವಂತೆ ನೋಡಿಕೊಳ್ಳಲಾಗಿದೆ. ದಾಖಲೆಯ ಉತ್ಪಾದನೆಯೂ ನಮ್ಮದಾಗಿದೆ. ರೈತರಿಂದ ಉತ್ಪನ್ನಗಳ ದಾಖಲೆ ಪ್ರಮಾಣದ ಖರೀದಿಯೂ ನಡೆದಿದೆ ಎಂದು ಪ್ರಧಾನಿಯವರು ತಿಳಿಸಿದ್ದಾರೆ ಎಂದು ಪ್ರಧಾನಿ ಮೋದಿ ಮಾತುಗಳನ್ನು ಪುನರುಚ್ಚರಿಸಿದರು.
ಫಸಲ್ ಬಿಮಾ ಯೋಜನೆಯಡಿ ರೈತರಿಗೆ 90,000 ಕೋಟಿ ರೂಪಾಯಿ ನೀಡಲಾಗಿದೆ. ಪ್ರತಿ ರೈತರಿಗೆ ಕ್ರೆಡಿಟ್ ಕಾರ್ಡ್ ನೀಡುತ್ತಿರುವುದು, ಮೀನುಗಾರರಿಗೂ ಇಂಥ ಸೌಲಭ್ಯಗಳ ವಿಸ್ತರಣೆ ಕುರಿತು ಪ್ರಧಾನಿ ಮೋದಿ ತಿಳಿಸಿದ್ದಾರೆ. ಕೃಷಿ ಮಾರುಕಟ್ಟೆಯ ನ್ಯೂನತೆಗಳನ್ನು ನಿವಾರಿಸುವ ದೃಷ್ಟಿಯಿಂದ ಹಿಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಇದೇ ಮಾದರಿಯ ಕೃಷಿ ಸುಧಾರಣೆಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದುದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಹಾಗೆಯೇ ನೇತಾಜಿಯವರ ತತ್ವ ಹಾಗೂ ಆದರ್ಶಗಳನ್ನು ನಾವು ಮರೆಯುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದ ಪ್ರಧಾನಿಗಳು, ಜಲ, ಭೂಮಿ, ಆಕಾಶ, ಬಾಹ್ಯಾಕಾಶ ಸೇರಿದಂತೆ ಸರ್ವ ಕ್ಷೇತ್ರಗಳಲ್ಲಿ ತನ್ನನ್ನು ರಕ್ಷಿಸಿಕೊಳ್ಳುವ ಶಕ್ತಿಯನ್ನು ಭಾರತ ಹೊಂದಿದೆ ಎಂದು ಹೇಳುವ ಅವರನ್ನು ನೆನಪಿಸಿಕೊಂಡಿದ್ದಾಗಿಯೂ ಕಟೀಲ್ ತಿಳಿಸಿದ್ದಾರೆ.
ಸರ್ಜಿಕಲ್ ದಾಳಿ ವೇಳೆ ದೇಶದ ಸಾಮಥ್ರ್ಯ ಸಾಬೀತಾಗಿದೆ. ಭಾರತದ ರಾಷ್ಟ್ರೀಯತೆಯು ಸಂಕುಚಿತತೆಯನ್ನು ಹೊಂದಿಲ್ಲ. ಸ್ವಾರ್ಥ ಅಥವಾ ಆಕ್ರಮಣಕಾರಿಯಾಗಿಲ್ಲ. ಆದ್ದರಿಂದ ನಮ್ಮ ರಾಷ್ಟ್ರೀಯತೆಯ ಮೇಲೆ ನಡೆಯುತ್ತಿರುವ ದಾಳಿಯ ವಿರುದ್ಧ ಪ್ರತ್ಯುತ್ತರ ನೀಡುವುದು ಅವಶ್ಯಕ. ದೇಶದ ವಿದೇಶಿ ವಿನಿಮಯ ಸಂಗ್ರಹವು ಗರಿಷ್ಠ ಮಟ್ಟದಲ್ಲಿದೆ. ಮೊಬೈಲ್ ಉತ್ಪಾದನೆ ಹಾಗೂ ಇಂಟರ್‍ನೆಟ್ ಬಳಕೆ ವಿಚಾರದಲ್ಲೂ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿ ಇರುವುದನ್ನು ಪ್ರಧಾನಿಗಳು ಜನತೆಗೆ ವಿವರಿಸಿದ್ದಾರೆ ಎಂದು ಹೇಳಿದ್ದಾಗಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ.