ಪ್ರಧಾನಿಗಳಿಂದ ವೈಫಲ್ಯ ಮುಚ್ಚಿಕೊಳ್ಳುವ ಹತಾಶ ಪ್ರಯತ್ನ: ಸಿದ್ದರಾಮಯ್ಯ

Public TV
2 Min Read
Modi Siddu

– ಪ್ರಧಾನಿಗಳ ಮೂಢತನದ ಭಾಷಣಗಳೇ ಕೊರೊನಾ ನಿರ್ಲಕ್ಷ್ಯಕ್ಕೆ ಕಾರಣ

ಬೆಂಗಳೂರು: ಇಂದು ಸಂಜೆ ಆರು ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶವಾಸಿಗಳನ್ನು ಉದ್ದೇಶಿಸಿ ಮಾಡಿರುವ ಭಾಷಣಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಧಾನಿಗಳು ಕೊರೊನಾ ವೈಫಲ್ಯ ಮುಚ್ಚಿಕೊಳ್ಳುವ ಹತಾಶ ಪ್ರಯತ್ನ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ. ಹಬ್ಬಗಳ ಸಮಯ ಇದಾಗಿದ್ದರಿಂದ ಜನರು ಅತ್ಯಂತ ಎಚ್ಚರಿಕೆಯಿಂದಿರಬೇಕೆಂದು ಪ್ರಧಾನಿಗಳು ದೇಶದ ಜನತೆಗೆ ಸಲಹೆ ನೀಡಿದ್ದರು. ಸಾಲು ಸಾಲು ಟ್ವೀಟ್ ಗಳ ಮೂಲಕ ಸಿದ್ದರಾಮಯ್ಯನವರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

PM Modi 2

ಆತ್ಮಾವಲೋಕನ ಮಾಡಿಕೊಳ್ಳಲಿ: ಜನತೆಗೆ ಕರ್ತವ್ಯಪಾಲನೆಯ ಪಾಠ ಮಾಡುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕರ್ತವ್ಯಪಾಲನೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿತ್ತು. ಕೊರೊನಾ ಸೋಂಕಿನ ನಿಯಂತ್ರಣ ಮತ್ತು ಅದರಿಂದಾಗಿ ಕಷ್ಟ-ನಷ್ಟಕ್ಕೀಡಾಗಿರುವ ಜನತೆಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಏನು ಮಾಡಿದೆ ಮತ್ತು ಮುಂದಿನ ದಿನಗಳಲ್ಲಿ ಏನು ಮಾಡಲಿದೆ ಎನ್ನುವುದನ್ನು ನರೇಂದ್ರ ಮೋದಿ ಅವರು ಇಂದಿನ ತಮ್ಮ ಭಾಷಣದಲ್ಲಿ ದೇಶದ ಜನತೆಗೆ ತಿಳಿಸಬೇಕಾಗಿತ್ತು.

PM MODI copy

ದೇಶದ ಜನತೆಗೆ ಬುದ್ದಿವಾದ ಹೇಳುವ ಮೂಲಕ ಪ್ರಧಾನಿಯವರು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ಹತಾಶ ಪ್ರಯತ್ನವನ್ನಷ್ಟೇ ಮಾಡಿದ್ದಾರೆ. ಕೊರೊನಾ ಸೋಂಕು ಉಲ್ಬಣಕ್ಕೆ ಜನರ ನಿರ್ಲಕ್ಷಕ್ಕಿಂತಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಗೇಡಿತನ ಕಾರಣ ಎನ್ನುವುದನ್ನು ಪ್ರಧಾನಿಯವರು ಒಪ್ಪಿಕೊಂಡು ದೇಶದ ಜನತೆಯಲ್ಲಿ ಕ್ಷಮೆಯಾಚಿಸಬೇಕಾಗಿತ್ತು.

PM MODI 1 copy

ಜಾಗಟೆ ಬಾರಿಸಿ, ದೀಪ ಹಚ್ಚಿ ಕೊರೊನಾ ಎದುರಿಸಲು ಕರೆನೀಡಿದ ಪ್ರಧಾನ ಮಂತ್ರಿಯವರ ಮೂಢತನದ ಭಾಷಣಗಳೇ ಕೊರೊನಾ ಸೋಂಕಿನ ಬಗ್ಗೆ ಜನರ ನಿರ್ಲಕ್ಷಕ್ಕೆ ಮುಖ್ಯ ಕಾರಣ. ರೋಗವನ್ನು ವೈಜ್ಞಾನಿಕವಾಗಿ ಎದುರಿಸಲು ಕರೆನೀಡಬೇಕಾದ ಪ್ರಧಾನಿ, ಟಿವಿ ಜ್ಯೋತಿಷಿಗಳ ರೀತಿಯಲ್ಲಿ ಪ್ರವಚನ ನೀಡಿದರೆ ಜನ ಮೂಢಮತಿಗಳಾಗದೆ ಇನ್ನೇನು ಆಗಲು ಸಾಧ್ಯ?

ದೇಶದ ಜನತೆಗೆ ಕರ್ತವ್ಯಪಾಲನೆಯ ಪ್ರವಚನ ನೀಡಿದ ಪ್ರಧಾನಿಗಳು ಅದರ ಜೊತೆಗೆ ಕೊರೊನಾ ಪರಿಹಾರದ ರೂ.20 ಲಕ್ಷ ಕೋಟಿ ಪ್ಯಾಕೇಜ್ ಏನಾಯಿತು? ಯಾರಿಗೆ ಎಷ್ಟು ತಲುಪಿದೆ? ಪಿ.ಎಂ. ಕೇರ್ಸ್ ನಿಧಿಗೆ ಬಂದ ದುಡ್ಡೆಷ್ಟು? ಕೊರೊನಾ ನಿಯಂತ್ರಣ ಮತ್ತು ಪರಿಹಾರಕ್ಕಾಗಿ ಆ ನಿಧಿಯಿಂದ ಬಳಕೆಯಾದ ದುಡ್ಡಿನ ಮೊತ್ತವೆಷ್ಟು? ಎಂಬುದನ್ನೂ ತಿಳಿಸಬೇಕಿತ್ತು.

Siddaramaiah 3

ಕೊರೊನಾ ಸೋಂಕು ಪ್ರಾರಂಭಗೊಂಡಾಗ ಪ್ರಧಾನಿಯವರು ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಜೂನ್ ನಲ್ಲಿ ಪ್ರಕಟಿಸಿದ್ದರು. ಅದು ಎಷ್ಟು ಜನರಿಗೆ ತಲುಪಿದೆ? ರಾಜ್ಯದ ಬಿಜೆಪಿ ಸರ್ಕಾರ ಅನ್ನಭಾಗ್ಯದಲ್ಲಿ ನೀಡಲಾಗುತ್ತಿದ್ದ ಅಕ್ಕಿಯನ್ನು 7 ರಿಂದ 5 ಕಿಲೋಗೆ ಇಳಿಸಿದೆ, ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಲು ಹೊರಟಿದೆ.

SIDDU MODI

ಮಿತವ್ಯಯ ಪಾಲನೆ ಮಾಡಿ ಲಭ್ಯ ಇರುವ ಸಂಪನ್ಮೂಲವನ್ನು ಕೊರೊನಾ ನಿಯಂತ್ರಣಕ್ಕಾಗಿ ಬಳಸಬೇಕಾದ ಕರ್ನಾಟಕ ಬಿಜೆಪಿ ಸರ್ಕಾರ ಕೊರೊನಾ ಕಾಯಿಲೆಯ ಪರಿಹಾರದ ನೆಪದಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ. ಇದೇನಾದರೂ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *