ಹಾಸನ: ಜಿಲ್ಲೆಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 8 ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣದಲ್ಲಿ ಮೂರು ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಬೇಲೂರು ವೃತ್ತದ ಸಿಪಿಐ ಮತ್ತು ತಂಡದವರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಖಚಿತ ಮಾಹಿತಿಯ ಮೇರೆಗೆ ಲಕ್ಯ ಗ್ರಾಮದ ವಾಸಿ ಮೆಕ್ಯಾನಿಕ್ ಶ್ರೀಕಾಂತ್ (26) ಹಾಗೂ ಆತನ ಸ್ನೇಹಿತರಾದ ಚೇತನ್ (29) ಮತ್ತು ಲೈಟ್ ಬಾಯ್ ಮೋಹನ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದರು.
ವರ್ಷದ ಆರಂಭದ ಜನವರಿ 6 ರಂದು ಅರೆಕೆರೆ ಗ್ರಾಮದ ಬಳಿಯ ಬಾಣಾವರ ಜಾವಗಲ್ ಮುಖ್ಯ ರಸ್ತೆಯ ಎಡ ಬದಿಯ ಹಳ್ಳದಲ್ಲಿ 25 ರಿಂದ 30 ವರ್ಷದ ವ್ಯಕ್ತಿಯೊಬ್ಬರ ಅರೆಬೆಂದ ಕೊಳೆತ ಶವ ಪತ್ತೆಯಾಗಿತ್ತು. ಈ ಕುರಿತು ಬಾಣಾವರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಎಎಸ್‍ಪಿ ನಂದಿನಿ ಅವರ ಮೇಲುಸ್ತುವಾರಿ, ಅರಸೀಕೆರೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಎಲ್. ನಾಗೇಶ್ ಹಾಗೂ ಬೇಲೂರು ವೃತ್ತ ನಿರೀಕ್ಷಕಸಿದ್ದರಾಮೇಶ್ವರ ಅವರ ನೇತೃತ್ವದಲ್ಲಿ ಬೇಲೂರು ಪಿಎಸ್‍ಐ ಆಜಂತ್ ಕುಮಾರ್ ಮತ್ತು ಸಿಬ್ಬಂದಿ ಒಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಅರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಶ್ರೀಕಾಂತ್‍ನ ಅಣ್ಣನ ಮಗನ ನಾಮಕರಣದ ಪಾರ್ಟಿಗೆ ಹೋಗಿ ಬರುತ್ತಿದ್ದ ಶ್ರೀಕಾಂತ್ ಮತ್ತು ಆತನ ಸ್ನೇಹಿತರಾದ ಚೇತನ್ ಮತ್ತು ಮೋಹನ್ ಚಿಕ್ಕಮಗಳೂರು ಲಕ್ಯ ಬಸ್ ನಿಲ್ದಾಣ ಬಳಿ ಕುಡಿದ ಅಮಲಿನಲ್ಲಿ ಭಿಕ್ಷುಕನೊಬ್ಬನ ಬಳಿ ಗಲಾಟೆ ಮಾಡಿಕೊಂಡರು. ಆ ಭಿಕ್ಷುಕ ಶ್ರೀಕಾಂತ್‍ನ ಕೈಗೆ ಕಚ್ಚಿ ಓಡಿ ಹೋಗುತ್ತಿದ್ದಾಗ, ಆತನ ಬೆನ್ನಟ್ಟಿದ ಮೂವರೂ ಹಿಡಿದು ಹಲ್ಲೆ ಮಾಡಿದ್ದಲ್ಲದೇ ಕೊಲೆ ಮಾಡಿ ಮಾರುತಿ ಎಸ್ಟಿಮ್ ಕಾರಿನಲ್ಲಿ ಶವ ಹಾಕಿಕೊಂಡು ಬಾಣಾವರ ಕಡೆಗೆ ಹೋಗಿ ಕೆರೆಕೋಡಿ ಹಳ್ಳದ ಸೇತುವೆ ಬಳಿ ಶವ ಸುಟ್ಟು ಹಾಕುವ ಯತ್ನ ಮಾಡಿದ್ದರು ಎಂದು ವಿಚಾರಣೆ ವೇಳೆ ಮಾಹಿತಿ ಲಭಿಸಿದೆ.
2ನೇ ಪ್ರಕರಣದಲ್ಲಿ ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬಾಗನಹಳ್ಳಿ ಕ್ರಾಸ್ ಬಳಿ ಕಳೆದ ತಿಂಗಳು ತಲೆ ಮೇಲೆ ಕಲ್ಲು ಎತ್ತಿ ಹಾಕಿ ದೊಡ್ಡಬಾಗನಹಳ್ಳಿ ಕ್ರಾಸ್ ಸಮೀಪ ಜವೇನಹಳ್ಳಿ ಕೊಪ್ಪಲು ಸ್ವಾಮೀಗೌಡ ಎಂಬುವರ ಪುತ್ರ ದಿನೇಶ್‍ನ್ನು ಕೊಲೆ ಮಾಡಲಾಗಿತ್ತು. ಶಕುನಿಗೌಡ ಎಂಬುವರ ಜಮೀನಿನ ರಸ್ತೆ ಬದಿ ಕಾಲುವೆಯಲ್ಲಿ ದಿನೇಶ್ ಶವ ಪತ್ತೆಯಾಗಿತ್ತು. ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಂದಿನಿ ಅವರ ಮೇಲುಸ್ತುವಾರಿಯಲ್ಲಿ ಹಾಸನ ಉಪವಿಭಾಗದ ಪೊಲೀಸ್ ಅಧೀಕ್ಷಕರಾದ ಪುಟ್ಟಸಾಮಿಗೌಡರ ಉಸ್ತುವಾರಿಯಲ್ಲಿ ಹಾಸನ ಗ್ರಾಮಾಂತರ ವೃತ್ತ ನಿರೀಕ್ಷಕ ಸುರೇಶ್ .ಪಿ ನೇತೃತ್ವದಲ್ಲಿ ಗೊರೂರು ಪಿಎಸ್‍ಐ ಜಗದೀಶ್ ಜಿ ಮತ್ತು ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.
ಮೈಸೂರು ಜಿಲ್ಲೆ ಕೆ.ಆರ್. ನಗರದ ನಿವಾಸಿ ಹಾಗೂ ಸ್ವಂತ ಸ್ಥಳ ಸೋಮವಾರ ಪೇಟೆ ತಾಲೂಕು ಶನಿವಾರ ಸಂತೆ ಹೋಬಳಿಯ ಅರೆಸೂರು ಗಾಮದ ಹೆಚ್.ಜಿ. ಮೋಹನ್‍ನನ್ನು ಪೊಲೀಸರು ಮಂಗಳವಾರ ಮುಂಜಾನೆ ಸಮೀಪದ ಮೊಸಳೆ ಹೊಸಹಳ್ಳಿ ಬಸ್ ನಿಲ್ದಾಣದ ಬಳಿ ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಯು ತಾನೇ ಈ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಸೆ.2 ರಂದು ದೊಡ್ಡಬಾಗನಹಳ್ಳಿ ಕ್ರಾಸ್ ಸಮೀಪ ಜವೇನಹಳ್ಳಿ ಕೊಪ್ಪಲು ಸ್ವಾಮೀಗೌಡ ಎಂಬುವರ ಪುತ್ರ ದಿನೇಶ್‍ಗೂ ಆರೋಪಿಗೂ ಮಾತಿಗೆ ಮಾತು ಬೆಳೆದು ದಿನೇಶನ ಕೊಲೆ ನಡೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯಶಸ್ವಿ ಕಾರ್ಯಾಚರಣೆ ನಡೆಸಿದ ತನಿಖಾ ತಂಡಕ್ಕೆ ಹಾಗೂ ಸಿಬ್ಬಂದಿ ರವಿಕುಮಾರ್, ಸುಬ್ರಮಣ್ಯ, ಅರುಣ್ ಕುಮಾರ್, ಅನಿಲ್‍ಕುಮಾರ್, ಪೀರ್ ಖಾನ್ ಅವರುಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.