ಪ್ರತಿ ಶಾಲೆಯಲ್ಲೂ ಅಟಲ್ ಟಿಂಕರಿಂಗ್ ಲ್ಯಾಬ್: ಡಿಸಿಎಂ ಭರವಸೆ

Public TV
2 Min Read
dcm ashwath narayanh

ಬೆಂಗಳೂರು: ಮಕ್ಕಳಲ್ಲಿ ಆವಿಷ್ಕಾರ ಹಾಗೂ ವೈಜ್ಞಾನಿಕ ಮನೋಭಾವವನ್ನು ಮೂಡಿಸಲು ಪ್ರತಿ ಶಾಲೆಯಲ್ಲೂ ಅಟಲ್ ಟಿಂಕರಿಂಗ್ ಲ್ಯಾಬ್ ಸ್ಥಾಪನೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ತಿಳಿಸಿದರು.

ನಗರದ ಮಲ್ಲೇಶ್ವರ 18ನೇ ಅಡ್ಡ ರಸ್ತೆಯ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪರಿಕಲ್ಪನೆಯಾಗಿ ದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳ ಪರ್ವ ಆರಂಭವಾಗಿದೆ ಎಂದರು.

ಮಕ್ಕಳಲ್ಲಿ ಕಲಿಕೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಮಹತ್ವದ ಪಾತ್ರ ವಹಿಸುತ್ತದೆ. ಆವಿಷ್ಕಾರ ಮನೋಭಾವನೆಯನ್ನೂ ಬೆಳೆಸುತ್ತದೆ. ಪ್ರತಿ ಶಾಲೆಯಲ್ಲೂ ಸ್ಥಾಪನೆ ಮಾಡುವುದು ಸರ್ಕಾರದ ಉದ್ದೇಶ. ಕೆಲ ಶಾಲೆಗಳಲ್ಲಿ ಸ್ಥಳಾಭಾವ ಇದ್ದರೆ ವಿಶಾಲ ಜಾಗವಿರುವ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಅನ್ನು ಕ್ಲಷ್ಟರ್ ಮಾದರಿಯಲ್ಲಿ ತೆರೆಯಲಾಗುವುದು ಎಂದು ಅವರು ಹೇಳಿದರು.

ಕಿರಿಯ ಮತ್ತು ಪ್ರಾಥಮಿಕ ಹಂತದ ಶಿಕ್ಷಣದಿಂದಲೇ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ನಮ್ಮ ರಾಜ್ಯದ ಶೈಕ್ಷಣಿಕ ಸ್ವರೂಪವೇ ಆಮೂಲಾಗ್ರವಾಗಿ ಬದಲಾಗುತ್ತದೆ. ಬೆಂಗಳೂರು ಜಗತ್ತಿನ ಟಾಪ್ ಹತ್ತು ನಗರಗಳ ಸ್ಥಾನದಲ್ಲಿದ್ದು, ಅದಕ್ಕೆ ಪೂರಕವಾಗಿ ನಮ್ಮ ಶಿಕ್ಷಣ ವ್ಯವಸ್ಥೆಯೂ ಬದಲಾಗಬೇಕು ಎಂದರು.

ಶಿಕ್ಷಣದ ಗುಣಮಟ್ಟವನ್ನು ಮಕ್ಕಳ ಆರಂಭದ ಹಂತದಿಂದಲೇ ಕಾಯ್ದುಕೊಳ್ಳಬೇಕು. ಬಾಲ್ಯದಲ್ಲಿ ಕಲಿಯುವ ಸಾಮಥ್ರ್ಯ ಹೆಚ್ಚಾಗಿರುತ್ತದೆ. ಬಹು ವಿಷಯಗಳನ್ನು, ಬಹುಭಾಷೆಗಳನ್ನು ಕಲಿಯುವ ಶಕ್ತಿ ಮಕ್ಕಳಿಗೆ ಹೆಚ್ಚಾಗಿರುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಕೆಲ ದೇಶಗಳಲ್ಲಿ ಪ್ರೌಢ ಶಿಕ್ಷಣ ಹಂತದಲ್ಲಿ ಉಪಗ್ರಹಾಧರಿತ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳ ಕಲಿಕೆ ಹಾಗೂ ಬೋಧನೆಯಲ್ಲಿ ಉಪಗ್ರಹಗಳ ಪಾತ್ರವಿದೆ. ಅಷ್ಟೇ ಏಕೆ ಶಾಲೆಗಳಲ್ಲೇ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ. ಇದೇ ಸುಧಾರಣೆ ನಮ್ಮಲ್ಲೂ ಆಗುತ್ತಿದ್ದು, ರಾಜ್ಯದ ಹಲವು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಉಪಗ್ರಹಗಳನ್ನು ಅಭಿವೃದ್ಧಿಪಡಿಸುವ ಕೆಲಸ ನಡೆದಿದೆ ಎಂದು ತಿಳಿಸಿದರು.

WhatsApp Image 2021 03 06 at 3.35.29 PM

ಈ ಲ್ಯಾಬ್ ಮಾಡಲು ಡೆಲ್ ಟೆಕ್ನಾಲಜೀಸ್ ನೆರವು ನೀಡಿದೆ. ಹೀಗೆ ಸರ್ಕಾರದ, ಸಮಾಜದ ಕೆಲಸಗಳಲ್ಲಿ ಖಾಸಗಿ ಸಹಭಾಗಿತ್ವ ಬಹಳ ಮುಖ್ಯವಾಗಿರುತ್ತದೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ಕ್ಷೇತ್ರ ಉದಾರವಾಗಿ ಮುಂದೆ ಬರಬೇಕು ಎಂದು ಡಿಸಿಎಂ ಕೋರಿದರು.

Share This Article
Leave a Comment

Leave a Reply

Your email address will not be published. Required fields are marked *