ಪುಣೆ: ಪ್ರತಿ ನಿಮಿಷಕ್ಕೆ 500, ಪ್ರತಿ ಗಂಟೆಗೆ 30 ಸಾವಿರ ಸೀಸೆ ಲಸಿಕೆಯನ್ನು ನಮ್ಮ ಯಂತ್ರಗಳು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಅದರ್ ಪೂನಾವಾಲಾ ಹೇಳಿದ್ದಾರೆ.
ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು 2021ರ ಕೊನೆಯಲ್ಲಿ ಲಸಿಕೆಯನ್ನು ನಾವು ಘೋಷಣೆ ಮಾಡಬಹುದು ಎಂದು ಹೇಳಿದ್ದಾರೆ.
ಆಕ್ಸ್‌ಫರ್ಡ್ ಮತ್ತು ಅಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಕೋವಿಡ್‌ಶೀಲ್ಡ್ ಹೆಸರಿನ ಲಸಿಕೆ ಮೊದಲ ಹಂತ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಜತೆಗೂಡಿ ಸೀರಮ್ ಭಾರತದಲ್ಲಿ ಕೋವಿಡ್ ವೈರಸ್ ನಿಯಂತ್ರಣದ ಲಸಿಕೆ ತಯಾರಿಕೆಗೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಅದರ್ ಪೂನಾವಾಲಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಲಸಿಕೆ ಯಶಸ್ವಿಯಾದರೆ ನಿಮ್ಮ ಸಂಸ್ಥೆಯಲ್ಲಿರುವ ಯಂತ್ರಗಳು ಎಷ್ಟು ಪ್ರಮಾಣದಲ್ಲಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಪ್ರಶ್ನೆಗೆ ಈಗಾಗಲೇ ನಮ್ಮ ಬಳಿ ಲಸಿಕೆ ತಯಾರಿಸಲು 6 ಯಂತ್ರಗಳಿವೆ. ಕೋವಿಶೀಲ್ಡ್ ಉತ್ಪಾದನೆ ಮಾಡಲೆಂದೇ ನಾವು ಈ ವರ್ಷ 200 ದಶಲಕ್ಷ ಡಾಲರ್ ಹಣವನ್ನು ಹೂಡಿಕೆ ಮಾಡಲಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಸುರಕ್ಷಿತ, ಯಾವುದೇ ಅಡ್ಡ ಪರಿಣಾಮವಿಲ್ಲ
ಯಂತ್ರದ ಸಾಮರ್ಥ್ಯದ ಬಗ್ಗೆ ಮಾತನಾಡಿ,ಪ್ರತಿ ಯಂತ್ರವು ಪ್ರತಿ ನಿಮಿಷಕ್ಕೆ 500, ಗಂಟೆಗೆ 30 ಸಾವಿರ ಸೀಸೆಯಲ್ಲಿ ಲಸಿಕೆಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಲಸಿಕೆಗೆ ಬೇಡಿಕೆ ತುಂಬಾ ಜಾಸ್ತಿಯಿದೆ ಎಂದು ವಿವರಿಸಿದರು.
ಆರಂಭದಲ್ಲಿ ನಾವು ಕೆಲ ಲಕ್ಷ ಲಸಿಕೆಯನ್ನು ಉತ್ಪಾದಿಸುತ್ತೇವೆ. ಈ ಲಸಿಕೆಗೆ ನಿಯಂತ್ರಕರಿಂದ ಅನುಮತಿ ಸಿಕ್ಕಿದ ಬಳಿಕ ಭಾರೀ ಪ್ರಮಾಣದಲ್ಲಿ ಉತ್ಪಾದನೆಗೆ ಮುಂದಾಗುತ್ತೇವೆ. ಪ್ರತಿ ತಿಂಗಳು 6 ರಿಂದ 7 ಕೋಟಿ ಲಸಿಕೆಯನ್ನು ನಾವು ಉತ್ಪಾದಿಸುತ್ತೇವೆ. ಮುಂದೆ ಈ ಪ್ರಮಾಣವನ್ನು 10 ಕೋಟಿಗೆ ಏರಿಸುತ್ತೇವೆ ಎಂದು ತಿಳಿಸಿದರು.
ಲಸಿಕೆಯ ಬೆಲೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, ಈಗಲೇ ಲಸಿಕೆಯ ಬೆಲೆಗೆ ಬಗ್ಗೆ ಊಹಿಸಿ ಮಾತನಾಡುವುದು ಸರಿಯಲ್ಲ. ಆದರೂ 1 ಸಾವಿರ ರೂ.ಗಿಂತ ಕಡಿಮೆ ಇರುವುಂತೆ ನೋಡಿಕೊಳ್ಳುತ್ತೇವೆ. ಸರ್ಕಾರದಿಂದ ಇದು ಉಚಿತವಾಗಿ ದೊರೆಯಬಹುದು. ಆದರೆ ಈಗ ನಮ್ಮ ಗಮನ ಎಲ್ಲವೂ ಲಸಿಕೆಯ ಅಭಿವೃದ್ಧಿ ಪಡಿಸುವುದರ ಮೇಲಿದೆ. ಕಡಿಮೆ ಅವಧಿಯಲ್ಲಿ ಪ್ರಪಂಚಕ್ಕೆ ಲಸಿಕೆಯನ್ನು ನೀಡವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂಂದು ಪೂನಾವಾಲಾ ತಿಳಿಸಿದರು.