ಕೊಪ್ಪಳ: ಪ್ರತಿಯೊಬ್ಬ ಮನುಷ್ಯನಿಗೂ ಡ್ರಗ್ಸ್ ಅವಶ್ಯಕತೆ ಇದೆ. ಡ್ರಗ್ಸ್ ಏನು ಮನುಷ್ಯನನ್ನ ಬಿಟ್ಟು ಇಲ್ಲ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಹಿಂದೆ ರಾಜಮಹಾರಾಜರ ಕಾಲದಿಂದಲೂ ನಶೆ ಮಾಡುವ ಪದ್ಧತಿ ಬಂದಿದೆ. ಡ್ರಗ್ಸ್ ಕೂಡ ಒಂದು ನಶೆ ಮಾಡುವ ವಸ್ತು, ಈಗ ಬೇರೆ ಬೇರೆ ವೆರೈಟಿ ನಶೆ ಮಾಡುವ ವಸ್ತುಗಳು ಕಂಡು ಹಿಡಿದಿದ್ದಾರೆ. ಡ್ರಗ್ಸ್ ವಸ್ತುವನ್ನ ಸಿನಿಮಾ ನಟ-ನಟಿಯರು ಹೆಚ್ಚು ಉಪಯೋಗ ಮಾಡುತ್ತಿರುವುದು ತಪ್ಪು ಎಂದರು.
ಸಮಾಜದಲ್ಲಿ ಒಳ್ಳೆಯ ಸಂದೇಶ ಕೊಡುವ ಸಿನಿಮಾ ಮಾಡಿ ಈಗ ಅದೇ ನಟಿಯರು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದು ತಪ್ಪು. ಯಾವುದೇ ಮಾಧ್ಯಮದವರು ಇದನ್ನು ಪ್ರಸಾರ ಮಾಡಬಾರದು. ಅವರಿಗೆ ಅಂಜಿಕೆ ಆಗಬೇಕು. ಗೌಪ್ಯವಾಗಿ ಶಿಕ್ಷೆ ನೀಡಬೇಕು ಎಂದು ಹೇಳಿದರು.
ರಾಜಕಾರಣಿಗಳು ವೈಯಕ್ತಿಕವಾಗಿ ಡ್ರಗ್ಸ್ ತೆಗೆದುಕೊಳ್ಳುವವರು ಇದ್ದೇ ಇರುತ್ತಾರೆ. ಎಲ್ಲೋ ಒಬ್ಬ ಮಹಾತ್ಮಗಾಂಧಿ ತರಹ ಇರುತ್ತಾರೆ. ಅದಕ್ಕೆ ನಾವೇನು ಮಾಡಕ್ಕಾಗಲ್ಲ. ಡ್ರಗ್ಸ್ ವಿಚಾರದಲ್ಲಿ ಈಗ ಜಾಗೃತಿ ಬಂದಿದೆ. ಇದನ್ನ ಇಲ್ಲೆ ಬಿಟ್ಟು ಬೇರೆ ವಿಷಯವನ್ನ ಸೃಷ್ಟಿ ಮಾಡಬೇಕೆಂದರು.
ಮನುಷ್ಯರಂದ್ರೆ ನಶೆಗೆ ದಾಸನಾಗೋದು ಸಹಜ. ತಿಳುವಳಿಕೆ ಇದ್ದೋರು ಕಡಿಮೆ ಮಾಡ್ತಾರೆ, ತಿಳುವಳಿಕೆ ಇಲ್ಲದೋರು ಹೆಚ್ಚು ಮಾಡುತ್ತಾರೆ. ನಾನಂತು ಅಫೀಮು, ಸಿಗರೇಟು ಸೇದುವವನಲ್ಲ. ಯಾವ ಕ್ಲಬ್ ಗೂ ಹೋಗುವವನಲ್ಲ, ನನ್ನದೇನಾದರೂ ಇದ್ದರೆ ಹೊರಹಾಕಿ ಎಂದು ಸವಾಲೆಸೆದರು.