– ಬಂದ್ ಫೇಲ್ ಅಂತ ಮರಾಠಿಗರ ವಿಜಯೋತ್ಸವ
ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಬಿಸಿ ಜೋರಾಗಿತ್ತು. ಬೆಳಗ್ಗೆ 8 ಗಂಟೆಯಿಂದ ಕಾವೇರಿದ್ದ ಬಂದ್ ಬಿಸಿ, ಮಧ್ಯಾಹ್ನ ವೇಳೆಗೆ ತಣ್ಣಗಾಗಿತ್ತು. ಬೆಂಗಳೂರಿನ ರಸ್ತೆಗಳೆಲ್ಲ ಜನರಿಲ್ಲದೆ ಬಣಗುಟ್ಟುತ್ತಿದ್ವು. ಬೆಂಗಳೂರಿನಲ್ಲಿ ಎಂದಿನಂತೆ ಬಸ್ ಸಂಚಾರ, ಆಟೋ ಸಂಚಾರ ಇತ್ತು. ಬಿಎಂಟಿಸಿ ಬಸ್ ಓಡಾಟ ಇದ್ದರೂ ಪ್ರಯಾಣಿಕರ ಸಂಖ್ಯೆ ಮಾತ್ರ ವಿರಳವಾಗಿತ್ತು.
ಗ್ರಾಹಕರಿಲ್ಲದೆ ಹೋಟೆಲ್, ಅಂಗಡಿಗಳು, ಮಾರುಕಟ್ಟೆಗಳು ಖಾಲಿ ಖಾಲಿ ಆಗಿದ್ದವು. ಮೆಟ್ರೋ ಸಂಚಾರ ಎಂದಿನಂತೆ ಇದ್ದರೂ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿತ್ತು. ಓಲಾ-ಊಬರ್, ಆಟೋ ಸಂಘ ಬಂದ್‍ಗೆ ಬೆಂಬಲ ನೀಡಿದ್ದರೂ ಎಂದಿನಂತೆ ರಸ್ತೆಗೆ ವಾಹನಗಳು ಇಳಿದಿದ್ದವು. ಮೈಸೂರು ರಸ್ತೆ, ಸುಮನಹಳ್ಳಿ ಜಂಕ್ಷನ್, ನಾಯಂಡಳ್ಳಿ ಜಂಕ್ಷನ್‍ಗಳಲ್ಲಿ ಎಂದಿನಂತೆ ವಾಹನಗಳ ಸಂಚಾರ ಇತ್ತು. ಇನ್ನು ಬೆಂಗಳೂರಿನಲ್ಲಿ ರ‍್ಯಾಲಿ ಪರಿಣಾಮ ಅರಮನೆ ಮೈದಾನ ರಸ್ತೆ, ಕಾವೇರಿ ಜಂಕ್ಷನ್, ಕಾರ್ಪೋರೇಷನ್ ಸರ್ಕಲ್, ಮೆಜೆಸ್ಟಿಕ್ ಸುತ್ತಾಮುತ್ತಾ ಕಿ.ಮೀಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಪ್ರತಿಭಟನಾಕಾರರು ಪೊಲೀಸರ ವಶಕ್ಕೆ: ಮರಾಠ ನಿಗಮ ಖಂಡಿಸಿ ರಸ್ತೆಗಿಳಿದ ಕನ್ನಡಪರ ಸಂಘಟನೆಗಳ ರ‍್ಯಾಲಿಗೆ ಪೊಲೀಸರು ಮಾರ್ಗ ಮಧ್ಯೆಯೇ ಬ್ರೇಕ್ ಹಾಕಿದ್ದರು. ಅನುಮತಿ ನಿರಾಕರಣೆ ಮಧ್ಯೆಯು ಟೌನ್‍ಹಾಲ್ ಬಳಿ 12ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆ ನಡೆಸಿದವು. ಟೌನ್‍ಹಾಲ್ ಮುಂದೆ ಜಮಾಯಿಸುತ್ತಿದ್ದಂತೆ ಪ್ರತಿಭಟನೆಗೆ ಪೊಲೀಸರು ಅವಕಾಶ ಕೊಡ್ಲಿಲ್ಲ. ವಾಟಾಳ್ ನಾಗರಾಜ್, ಸಾರಾ ಗೋವಿಂದು & ಕಾರ್ಯಕರ್ತರನ್ನ ವಶಕ್ಕೆ ಪಡೆದರು.
ಸರ್ಕಾರದ ವಿರುದ್ಧ ಕಿಡಕಾರಿದ ವಾಟಾಳ್, ಯಡಿಯೂರಪ್ಪ ಮರಾಠಿ ಏಜೆಂಟ್, ಹಿಟ್ಲರ್ ವರ್ತನೆ ಅಂತ ಗುಡುಗಿದರು. ಬುಧವಾರ ಸಭೆ ಮಾಡಿ ಮತ್ತೆ ಹೋರಾಟದ ಚರ್ಚೆ ಮಾಡ್ತೇವೆ ಅಂತ ಎಚ್ಚರಿಸಿದರು. ಮತ್ತೊಂದ ಕಡೆ, ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ತೆರಳ್ತಿದ್ದ ಕರವೇ ನಾರಾಯಣಗೌಡ ಬಣವನ್ನ ರೇಸ್‍ಕೋರ್ಸ್ ಬಳಿ ಪೊಲೀಸರು ವಶಕ್ಕೆ ಪಡೆದ್ರು. ಈ ವೇಳೆ ನಾರಾಯಣಗೌಡ & ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು.
ಬಂದ್‍ಗೆ ನೈತಿಕ ಬೆಂಬಲ ಕೊಟ್ಟಿದ್ದ ಕರವೇ ಪ್ರವೀಣ್ ಶೆಟ್ಟಿ ಬಣ ಮೇಖ್ರಿ ಸರ್ಕಲ್‍ನಿಂದ ಮೌರ್ಯ ಸರ್ಕಲ್‍ವರೆಗೆ ರ‍್ಯಾಲಿ ನಡೆಸಿದರು. ಮರಾಠ ಪ್ರಾಧಿಕಾರ ವಿರೋಧಿಸಿ ನಗರದ ಸಿಟಿ ಸಿವಿಲ್ ಕೋರ್ಟ್ ಮುಂಭಾಗದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನೋ ಬಂದ್: ಜಿಲ್ಲೆಗಳಲ್ಲಿ ಬಂದ್ ಬಿಸಿ ತಟ್ಟಿಲ್ಲ. ಮಾಮೂಲಿನಂತೆ ಜನಜೀವನ ಇತ್ತು. ಆದರೆ ಕೆಲ ಸಂಘಟನೆ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ರು. ರಾಮನಗರದಲ್ಲಿ ಪ್ರತಿಭಟನೆ ವೇಳೆ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೀತು. ಗದಗನಲ್ಲಿ ಶಾಸಕ ಬಸನಗೌಡ ಯತ್ನಾಳ ಪ್ರತಿಕೃತಿ ದಹಿಸಲು ಕರವೇ ಕಾರ್ಯಕರ್ತರು ಯತ್ನಿಸಿದರು. ಇದಕ್ಕೆ ಪೊಲೀಸರು ಅವಕಾಶ ಕೊಡ್ಲಿಲ್ಲ. ವಾಗ್ವಾದ ನಡೀತು. ಆದರೂ ಕರವೇ ಕಾರ್ಯಕರ್ತನೊಬ್ಬ ಬೆಂಕಿ ಹಚ್ಚೇಬಿಟ್ಟ. ತಕ್ಷಣವೇ ಅಲ್ಲಿದ್ದ ಎಲ್ಲರೂ ದಿಕ್ಕಾಪಾಲಾಗಿ ಓಡಿದರು.
ಕೊಪ್ಪಳದ ಗಂಗಾವತಿಯಲ್ಲಿ ಉಪ್ಪಿ 2 ಶೈಲಿಯಲ್ಲಿ ಉಲ್ಟಾ ನಿಂತು ಪ್ರತಿಭಟನೆ ನಡೆಸಿದ್ರು. ಯಾದಗಿರಿಯಲ್ಲಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಕೆಂಪು ಮೆಣಸಿನಕಾಯಿ ತಿನ್ನುವ ಮೂಲಕ ಪ್ರತಿಭಟನೆ ನಡೆಸಿದರು. ರಾಯಚೂರಲ್ಲಿ ತಲೆ ಮೇಲೆ ಇಟ್ಟಿಗೆ ಹೊತ್ತುಕೊಂಡು ಅರೆಬೆತ್ತಲೆ ಪ್ರತಿಭಟನೆ ನಡೆಸಲಾಯ್ತು. ಸರ್ಕಾರ ಸತ್ತಿದೆ ಎಂದು ರಸ್ತೆಯಲ್ಲಿ ಕುಳಿತು ಗಳಗಳನೇ ಅಳುತ್ತ ಶ್ರದ್ದಾಂಜಲಿ ಸಲ್ಲಿಸಿದ್ರು. ಚಿತ್ರದುರ್ಗದ ಓಬವ್ವ ವೃತ್ತದಲ್ಲಿ ಕರವೇ ಕಾರ್ಯಕರ್ತರು ಬಾಯಿ ಬಡಿದುಕೊಂಡು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಮರಾಠಿಗರಿಂದ ವಿಜಯೋತ್ಸವ: ಮರಾಠ ನಿಗಮ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ವಿಫಲ ಅಂತ ಧಾರವಾಡದಲ್ಲಿ ಮರಾಠಿಗರು ವಿಜಯೋತ್ಸವ ಮಾಡಿದ್ದಾರೆ. ಸರ್ಕಾರದ ಮರಾಠ ನಿಗಮ ಅಭಿವೃದ್ಧಿ ಸ್ವಾಗತಿಸಿ ಪೊಲೀಸರ ವಿರೋಧದ ನಡುವೆಯೂ ಧಾರವಾಡದಲ್ಲಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ.
ಬೆಳಗಾವಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಕರ್ನಾಟಕ ಬಂದ್‍ಗೆ ಜನರು ಬೆಂಬಲ ನೀಡಿಲ್ಲ. ಮರಾಠಿ ಸಮುದಾಯದ ಬಡವರ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆ ಮಾಡಲಾಗಿದೆ. ನಿಗಮ ಸ್ಥಾಪನೆ ಮಾಡಿರುವುದು ಮರಾಠಿ ಭಾಷೆಯ ಸಲುವಾಗಿ ಅಲ್ಲ, ಮರಾಠ ಸಮುದಾಯದ ಅಭಿವೃದ್ಧಿಗಾಗಿ ಎಂದರು.