ಬೆಂಗಳೂರು: ಪ್ರಚಾರಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಸಾರಾ ಗೋವಿಂದ್ ಅವರು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾದ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಈ ವಿಚಾರದ ಬಗ್ಗೆ ಮಾತನಾಡಿದ್ದ ಪ್ರಶಾಂತ್ ಸಂಬರಗಿಯವರು, ಕೆಲ ನಟ-ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಸಾರಾ ಗೋವಿಂದ್ ಅವರು ಸಂಬರಗಿ ನಮ್ಮ ಚಿತ್ರರಂಗದವರೇ ಅಲ್ಲ ಎಂದು ದೂರಿದ್ದರು. ಈಗ ಇದೇ ವಿಚಾರವಾಗಿ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ.
Advertisement
Advertisement
ಇಂದು ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾರಾ ಗೋವಿಂದು, ಹಾದಿ ಬಿದಿಯಲ್ಲಿ ಮಾತಾಡೋರಿಗೆಲ್ಲಾ ಉತ್ತರ ಕೊಡೋಕಾಗಲ್ಲ. ಪ್ರಶಾಂತ್ ಸಂಬರಗಿ ಯಾರು? ನಮ್ಮ ಮೆಂಬರ್ ಅಲ್ಲ, ಸದಸ್ಯ ಅಲ್ಲ. ಕನ್ನಡ ಚಿತ್ರ ರಂಗಕ್ಕೂ ಪ್ರಶಾಂತ್ ಸಂಬರಗಿಗೂ ಏನ್ ಸಂಬಂಧ, ಚಿತ್ರರಂಗಕ್ಕೆ ಇವರ ಕೊಡುಗೆ ಏನು? ನಮ್ಮ ಬಗ್ಗೆ ಮಾತಾಡೋಕೆ, ಪ್ರಶ್ನೆ ಮಾಡೋಕೆ ಇವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
Advertisement
Advertisement
ವಾಣಿಜ್ಯ ಮಂಡಳಿಗೆ ಒಂದು ಘನತೆ, ಗೌರವ ಇದೆ. ಎಲ್ಲೋ ಕುಳಿತುಕೊಂಡು ಮಾತಾಡೋದಲ್ಲ. ಮೊದಲು ಕನ್ನಡ ಬೆಳೆಸಿ, ಕನ್ನಡತನ ಉಳಿಸಿ ಆಮೇಲೆ ಚಿತ್ರರಂಗದ ಬಗ್ಗೆ ಮಾತಾಡಿ. ನಮ್ಮ ಚಿತ್ರರಂಗ ಬೆಳೆಸೋದಕ್ಕೆ, ಉಳಿಸೋದಕ್ಕೆ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ನಿಮ್ಮಿಂದ ನಾವು ಕಲಿಯಬೇಕಿಲ್ಲ, ಚಿತ್ರರಂಗದ ಬಗ್ಗೆ ಮಾತಾಡುವಾಗ ಹಗುರವಾಗಿ ಮಾತಾಡಬೇಡಿ. ಮಂಡಳಿ ರಚನೆ ಆಗಿ 75 ವರ್ಷ ಆಗಿದೆ. ವಾಣಿಜ್ಯ ಮಂಡಳಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಅವರ ಮಾತಿಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಸಾರಾ ಗೋವಿಂದು ಅವರು ಕಿಡಿಕಾರಿದ್ದಾರೆ.