ಪ್ರಕ್ಷುಬ್ದಗೊಂಡ ಅರಬ್ಬಿ ಸಮುದ್ರದಲ್ಲಿ ಕೋಲಾಹಲ – ತೌಕ್ತೆ ಅಬ್ಬರಕ್ಕೆ ಕರಾವಳಿ ಅಲ್ಲೋಲ ಕಲ್ಲೋಲ

Public TV
3 Min Read
RAIN 7

– ಕರಾವಳಿ ರಾಜ್ಯಗಳಲ್ಲಿ ಭಾರೀ ಅವಾಂತರ

ಬೆಂಗಳೂರು: ದೇವರನಾಡಲ್ಲಿ ತೌಕ್ತೆ ಅಬ್ಬರಿಸೋಕೆ ಶುರು ಮಾಡಿದೆ. ಬೃಹತ್ ಅಲೆಗಳು ಮನೆಗಳತ್ತ ನುಗ್ಗಿಬರ್ತಿದೆ. ಹಲವು ಮನೆಗಳು ಸಮುದ್ರರಾಜನ ಪಾಲಾಗಿದೆ. ಕರ್ನಾಟಕದ ಕರಾವಳಿಯಲ್ಲಿ ಭಾರೀ ಮಳೆಯಾಗ್ತಿದ್ದು ಅವಾಂತರ ಸೃಷ್ಟಿಯಾಗಿದೆ.

RAIN 8

ಕೊರೊನಾ ನಡುವೆ ಕೇರಳಕ್ಕೆ ಇಂದು ತೌಕ್ತೆ ಚಂಡಮಾರುತ ಅಪ್ಪಳಿಸಲಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ 165ರಿಂದ 175 ಕೀಲೋಮೀಟರ್ ವೇಗದಲ್ಲಿ ಚಂಡಮಾರುತ ಕೇರಳ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ಈಗಾಗಲೇ ದೇವರನಾಡಲ್ಲಿ ತೌಕ್ತೆ ಆರ್ಭಟ ಶುರುವಾಗಿದೆ. ಕೇರಳದ ಹಲವೆಡೆ ಭಾರೀ ಮಳೆಯಾಗುತ್ತಿದ್ದು ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇರಳದ ತಿರುವನಂತಪುರಂ, ಕೊಲ್ಲಂ, ಪಥನಂತಿಟ್ಟ, ಮಲಪುರಂ, ಕೊಯಿಕ್ಕೋಡ್, ವಯನಾಡು, ಕಣ್ಣೂರಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ರಸ್ತೆಯಲ್ಲೆಲ್ಲಾ ನೀರು ನಿಂತಿದ್ದು, ಹಲವು ಮನೆಗಳು ಧರಾಶಾಹಿಯಾಗಿದೆ.

RAIN 6 1

ಸಮುದ್ರದಲ್ಲಿ ದೊಡ್ಡ ದೊಡ್ಡ ಅಲೆಗಳು ಏಳುತ್ತಿದೆ. ಕಾಸರಗೋಡಿನಲ್ಲಿ ಭಾರೀ ಮಳೆಗೆ ಸಮುದ್ರತೀರದಲ್ಲಿದ್ದ ಎರಡು ಅಂತಸ್ತಿನ ಮನೆಯೊಂದು ಕೊಚ್ಚಿಹೋಗಿದೆ. ಮೂಸ ಎಂಬುವವರಿಗೆ ಸೇರಿದ ಕಾಸರಗೋಡಿನ ಉಪ್ಪಳದ ಮೌಸೋದಿ ತೀರಪ್ರದೇಶದಲ್ಲಿದ್ದ ಮನೆ ಇದಾಗಿದೆ. ಮನೆ ಕುಸಿದು ಬೀಳುತ್ತಿರೋ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ಕೇರಳದಲ್ಲಿ ಬೃಹತ್ ಅಲೆಗಳು ಏಳುತ್ತಿದ್ದು ಮನೆಗೆ ಸಮುದ್ರರಾಜ ದಿಗ್ಬಂಧನ ಹಾಕಿದ್ದಾನೆ. ಮನೆ, ಸುತ್ತಲಿನ ಪ್ರದೇಶದಲ್ಲಿ ಪ್ರವಾಹವೇ ತುಂಬಿಕೊಂಡಿದೆ.

RAIN 5 1

ತೌಕ್ತೆ ಎಫೆಕ್ಟ್‍ಗೆ ತಿರುವನಂತಪುರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿದೆ. ತಿರುವನಂತಪುರದ ರಸ್ತೆಗೆ ಹಾನಿಯಾಗಿ, ಅರ್ಧದಷ್ಟು ರಸ್ತೆ ಸಮುದ್ರಪಾಲಾಗಿದೆ. ತಿರುವನಂತಪುರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಕಡಲಲ್ಲಿ ಅಬ್ಬರಿಸಿ ಬರೋ ಅಲೆ ತಡೆಗೋಡೆ ಮೇಲೆ ಬಂತು ಮನೆಗಳಿರುವ ಪ್ರದೇಶಗಳತ್ತ ನುಗ್ಗಿದೆ. ತ್ರಿಶೂರ್ ಕೂಡ ತೌಕ್ತೆ ಅಬ್ಬರಕ್ಕೆ ತತ್ತರಿಸಿದೆ. ಕಲ್ಲಿನಿಂದ ನಿರ್ಮಿಸಿರುವ ತಡೆಗೋಡೆ ದಾಟಿ ಊರಿನೊಳಗೆ ನೀರು ನುಗ್ಗಿದೆ. ಪರಿಣಾಮ ಹತ್ತಾರು ಮನೆಗಳು ಜಲಾವೃಗೊಂಡಿದೆ. ಅಲಪುಜ್ಜದಲ್ಲಿ ತೌಕ್ತೆ ಎಫೆಕ್ಟ್ ಜೋರಾಗಿದೆ. ಇಲ್ಲಿನ ಮನೆ, ಶಾಲೆಯ ಮೇಲೆ ಮರ, ವಿದ್ಯುತ್ ಕಂಬಗಳು ಉರುಳಿಬಿದ್ದಿದೆ. ಮನೆಗಳೆಲ್ಲಾ ಹಾನಿಯಾಗಿದೆ. ಜಿಲ್ಲಾಡಳಿತ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತೆರವುಗೊಳಿಸಿದ್ರು.

RAIN 3 1

ಇದಿಷ್ಟು ಕೇರಳದ ಕಥೆಯಾದರೆ ಕರ್ನಾಟಕದ ಕರಾವಳಿಗೂ ತೌಕ್ತೆ ಚಂಡಮಾರುತ ಎಫೆಕ್ಟ್ ತಟ್ಟಲಿದೆ. ಮತ್ತು ಕೆಲವೆಡೆ ಈಗಾಗಲೇ ತಟ್ಟಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಸೇರಿದಂತೆ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡದ ಕಡಲತೀರದಲ್ಲಿ ಮಳೆ ಅಬ್ಬರಕ್ಕೆ ಸೋಮೇಶ್ವರ ಕಡಲತೀರದಲ್ಲಿದ್ದ ಸ್ಮಶಾನದ ತಡೆಗೋಡೆ ಕೊಚ್ಚಿಹೋಗಿತ್ತು. ಪರಿಣಾಮ ಸ್ಮಶಾನ ಕುಸಿದುಬಿದ್ದಿದೆ.

RAIN 4 1

ಮಂಗಳೂರು ಹೊರವಲಯದ ಉಳ್ಳಾಲ, ಕೋಟೆಪುರ, ಕೈಕೊ, ಸಸಿಹಿತ್ಲು ಪ್ರದೇಶದಲ್ಲಿ ಕಡಲ ಕೊರೆತ ಆತಂಕ ಶುರುವಾಗಿದೆ. ಸಸಿಹಿತ್ಲುವಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಕಟ್ಟಡ, ಕೆಲ ಅಂಗಡಿಗಳು ಸಮುದ್ರಪಾಲಾಗಿದೆ. ಹಲವು ಬೋಟ್‍ಗಳಿಗೆ ಹಾನಿಯಾಗಿದೆ. ಉಡುಪಿಯ ಸಮುದ್ರತೀರದಲ್ಲೂ ಪ್ರವಾಹದ ಅಬ್ಬರ ಜೋರಾಗಿದೆ. ಇಲ್ಲಿನ ಮರವಂತೆ, ಉಪ್ಪುಂದದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಮೀನುಗಾರಿಕಾ ಶೆಡ್, ಜನರನ್ನು ಶಿಫ್ಟ್ ಮಾಡಲಾಗಿದೆ. ಮಲ್ಪೆಯಲ್ಲಿ ಕ್ರೈನ್ ಬಳಸಿ ಬೋಟ್‍ಗಳನ್ನು ಶಿಫ್ಟ್ ಮಾಡಲಾಗ್ತಿದೆ.

RAIN 2 1

ಉತ್ತರ ಕನ್ನಡದ ಜಾಲಿಕೊಡಿಯಲ್ಲಿ ಅಲೆಗಳ ಅಬ್ಬರಕ್ಕೆ ಎರಡು ಬೋಟ್‍ಗಳ ಮಧ್ಯೆ ಸಿಲುಕಿ ಮೀನುಗಾರ ಈರಣ್ಣ ನಾಯ್ಕ ಸಾವನ್ನಪ್ಪಿದ್ದಾರೆ. ಅಲೆಗಳ ಅಬ್ಬರ ಹೆಚ್ಚಾಗಿದ್ದು ಮೀನುಗಾರರ ಶೆಡ್‍ಗೆ ನೀರು ನುಗ್ಗಿದೆ. ಈಗಾಗಲೇ ಕಡಲತೀರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬಿರುಗಾಳಿ ಸಹಿತ ಸಮುದ್ರದ ರುದ್ರ ನರ್ತನಕ್ಕೆ ಕುಮಟಾ ಭಾಗದ ವನ್ನಳ್ಳಿ, ನ್ಯೂ ಫಿಷ್ ಮಾರ್ಕೇಟ್, ಗುಂದ ಪ್ರದೇಶದಲ್ಲಿ ಸಮುದ್ರದ ನೀರು ಮನೆಗಳಿಗೆ ನುಸುಳಿ ಭಾರೀ ಅನಾಹುತವನ್ನು ಸೃಷ್ಟಿಸಿದೆ. ಈ ಭಾಗದಲ್ಲಿ 30 ಕ್ಕೂ ಹೆಚ್ವು ಮನೆಗಳು ಸಮುದ್ರದ ನೀರಿನಿಂದ ಸಂಪೂರ್ಣ ಜಲಾವೃತವಾಗಿ ಲಕ್ಷಾಂತರ ಮೌಲ್ಯದ ವಸ್ತುಗಳು,ಆಹಾರ ಪದಾರ್ಥಗಳು ನೀರಿನಲ್ಲಿ ಕೊಚ್ಚಿ ಹೋಗಿದೆ.

RAIN 1 1

ಕೊಡಗು, ಮೈಸೂರು, ಹಾಸನ, ಕೋಲಾರದಲ್ಲಿ ಭಾರೀ ಮಳೆಯಾಗಿದೆ. ಕೊಡಗು ಜಿಲ್ಲೆಯ ಜನರ ರಕ್ಷಣೆಗಾಗಿ ಈ ಬಾರಿಯೂ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ ಯೋಧರು ಬಂದಿಳಿದ್ದಾರೆ. ಆಂಧ್ರ ಪ್ರದೇಶದ ಗುಂಟೂರು ವಿಜಯವಾಡದಲ್ಲಿರುವ ಎನ್‍ಡಿಆರ್‍ಎಫ್ ಬಟಾಲಿಯನ್‍ನ 20 ಮಂದಿ ಯೋಧರು ನಗರದ ಪೊಲೀಸ್ ಸಮುದಾಯ ಭವನ ಮೈತ್ರಿಗೆ ಆಗಮಿಸಿದೆ.

Share This Article
Leave a Comment

Leave a Reply

Your email address will not be published. Required fields are marked *