ಹಾಸನ: ಪೌಷ್ಟಿಕಾಂಶಯುಕ್ತ ಆಹಾರ ಕೊಡದಿದ್ದರೆ ನಾವು ಹೇಗೆ ಹುಷಾರಾಗುತ್ತೇವೆ. ಬರೀ ಅನ್ನ ಬಿಟ್ರೆ ನಮಗೆ ಬೇರೆ ಆಹಾರ ಕೊಡುತ್ತಿಲ್ಲ ಎಂದು ಹಾಸನದ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ತಮಗೆ ನೀಡುತ್ತಿರುವ ಚಿಕಿತ್ಸಾ ವಿಧಾನದ ಬಗ್ಗೆ ಅಸಮಾಧಾನ ಹೊರಹಾಕಿ ವಿಡಿಯೋ ಮಾಡಿರುವ ಕೊರೊನಾ ಸೋಂಕಿತರು, ನಮಗೆ ಆರಂಭದ ಐದು ದಿನ ಮಾತ್ರ ಮೆಡಿಸಿನ್ ಕೊಟ್ರು. ಈಗ ಮೆಡಿಸಿನ್ ಕೊಡ್ತಿಲ್ಲ. ಬರೀ ಅನ್ನ ಕೊಡ್ತಾರೆ. ಮೊಟ್ಟೆ ಮುದ್ದೆ ಕೊಡ್ತಿಲ್ಲ. ನಾವು ಬಂದು 35 ದಿನದ ಮೇಲಾಯ್ತು. ಪ್ರತಿ ಟೆಸ್ಟ್‍ನಲ್ಲೂ ಪಾಸಿಟಿವ್ ಬರ್ತಿದೆ ಅಂತಾ ಹೊರಗೆ ಕಳುಹಿಸುತ್ತಿಲ್ಲ. ನಮಗೆ ಪೌಷ್ಟಿಕಾಂಶಯುಕ್ತ ಆಹಾರ ಕೊಡದಿದ್ರೆ ನಾವು ಹೇಗೆ ಹುಷಾರಾಗುತ್ತೇವೆ ಎಂದು ಸೋಂಕಿತತು ಅಸಮಾಧಾನ ಹೊರಹಾಕಿದ್ದಾರೆ.
Advertisement
Advertisement
ನಮಗೆ ನೆಗೆಟಿವ್ ಬರುವವರೆಗೂ ಇರಿ ಅಂತಾರೆ. ಆದರೆ ಒಳ್ಳೆ ಊಟ ಸಿಗದಿದ್ರೆ ನೆಗೆಟಿವ್ ಹೇಗೆ ಬರುತ್ತೆ. ಅಷ್ಟೇ ಅಲ್ಲದೆ ಕೆಲವರು ಹುಷಾರಾಗಿ ಹೋದ್ರೆ ಮತ್ತೆ ಕೆಲವರು ಹೊಸ ರೋಗಿಗಳು ಬರುತ್ತಿದ್ದಾರೆ. ಹೀಗೆ ಬರುವ ಹೊಸ ರೋಗಿಗಳ ಜೊತೆ ನಮ್ಮನ್ನು ಇಟ್ಟರೆ ನಮ್ಮ ಖಾಯಿಲೆ ಹೇಗೆ ಹುಷಾರಾಗುತ್ತೆ. ಸೋಪು, ಬಿಸಿ ನೀರು ಸೇರಿದಂತೆ ಕೆಲವೊಂದು ಮೂಲಭೂತ ಅವಶ್ಯಕ ವಸ್ತು ಸಿಗುತ್ತಿಲ್ಲ. ಆರಂಭದಲ್ಲಿ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಈಗ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನಾವು ಕೆಲವರು ರೈತರಿದ್ದೇವೆ. ಬೆಳೆದು ನಿಂತ ಬೆಳೆ ಕಟಾವಿಗೂ ಸಾಧ್ಯವಾಗದೆ ಆಸ್ಪತ್ರೆಯಲ್ಲಿ ಸಿಲುಕಿದ್ದೇವೆ. ದಯವಿಟ್ಟು ನಮಗೆ ಸೂಕ್ತ ರೀತಿಯಲ್ಲಿ ಸಹಾಯ ಮಾಡಿ ಎಂದು ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ.