ಪೋಷಕರು ಅನುಕೂಲಕರವಾಗಿದ್ರೆ ಶುಲ್ಕ ಪಾವತಿಸಿ: ಸುರೇಶ್ ಕುಮಾರ್

Public TV
2 Min Read
CNG SURESH 3

– ಖಾಸಗಿ ಶಾಲಾ ಶಿಕ್ಷಕರು ತರಕಾರಿ ಮಾರೋ ದುಸ್ಥಿತಿ ಬಂದಿದೆ
– ಎಲ್ಲಾ ಸಮಸ್ಯೆಗೂ ಸೂಕ್ತ ಪರಿಹಾರ ಒದಗಿಸ್ತೀನಿ
– ಝೀರೋ ಬಡ್ಡಿದರದಲ್ಲಿ ಲೋನ್ ಬಗ್ಗೆ ಚರ್ಚೆ

ಚಾಮರಾಜನಗರ: ಯಾವ ಪೋಷಕರು ಅನುಕೂಲಕರವಾಗಿದ್ದಾರೆ ಅಂತಹವರು ಶುಲ್ಕ ಪಾವತಿಸಿ. ಫೀಸ್ ಪಾವತಿ ಮಾಡಿದ್ರೆ ಶಿಕ್ಷಕರಿಗೆ ವೇತನ ಕೊಡಲೂ ಅನುಕೂಲವಾಗುತ್ತೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಷ್ಟೇ ಮಹತ್ವವನ್ನು ಖಾಸಗಿ ಶಾಲೆಗಳು ವಹಿಸಿವೆ. ಖಾಸಗಿ ಶಾಲೆ ಬೇಕು ಅಂತ ಇಷ್ಟಪಟ್ಟು, ಕಷ್ಟಪಟ್ಟು ಪೋಷಕರು ಶಾಲೆಗೆ ಸೇರಿಸಿದ್ದಾರೆ. ಶಾಲೆಗೆ, ಪೋಷಕರಿಗೆ ಆರೋಗ್ಯಕರ ಸಂಬಂಧವಿರಬೇಕು. ಖಾಸಗಿ ಶಾಲಾ ಸಂಘಟನೆ ಜೊತೆ ನಾನು ಮಾತುಕತೆ ನಡೆಸ್ತೇನೆ ಎಂದರು.

CNG SURESH

ಯಾವ ಪೋಷಕರು ಅನುಕೂಲಕರವಾಗಿದ್ದಾರೆ ಅಂತಹವರು ಫೀಸ್ ಪಾವತಿಸಿ. ಹೀಗೆ ಮಾಡಿದ್ದಲ್ಲಿ ಶಿಕ್ಷಕರಿಗೆ ವೇತನ ಕೊಡಲು ಸಹಾಯವಾಗುತ್ತೆ. ಈಗಾಗಲೇ ಖಾಸಗಿ ಶಾಲಾ ಶಿಕ್ಷಕರು ತರಕಾರಿ ಮಾರುವ ದುಸ್ಥಿತಿ ಬಂದಿದೆ. ಪೋಷಕರು ಹಾಗೂ ಶಾಲೆಯ ನಡುವೆ ಸಂಘರ್ಷ ಉಂಟಾಗಬಾರದು. ಬೆಂಗಳೂರಿಗೆ ಹೋದ ನಂತರ ಸಭೆ ನಡೆಸಿ ಪರಿಹಾರ ಮಾಡ್ತೀನಿ ಎಂದು ಸ್ಪಷ್ಟಪಡಿಸಿದರು.

ಖಾಸಗಿ ಶಾಲೆಗೆ ಲೋನ್ ಕೊಡಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಲೋನ್ ಕೊಡಿಸುವ ಪ್ರಸ್ತಾಪ ಬಂದಿತ್ತು. ಕೆಲವು ಖಾಸಗಿ ಶಾಲೆಗಳು ಝೀರೋ ಬಡ್ಡಿದರದಲ್ಲಿ ಲೋನ್ ಕೊಡಿಸಿ ಅಂತ ಕೇಳಿದ್ದವು. ಕೆಲವು ಬ್ಯಾಂಕರ್ಸ್ ಜೊತೆ ಮಾತನಾಡಿದಾಗ ಹಿಂದೇಟು ಹಾಕಿದ್ದಾರೆ. ನಮ್ಮ ಆರ್ಥಿಕ ಇಲಾಖೆ ಜೊತೆ ಚರ್ಚೆ ನಡೆಸಿ ಲೋನ್ ಕೊಡಿಸಬಹುದಾ ಅಂತ ಯೋಚಿಸ್ತೀನಿ ಎಂದು ಹೇಳಿದರು.

CNG SURESH 1

ಕೆಲವು ಶಾಲೆಗಳ ಪ್ರಕಾರ ಲೋನ್ ಸಿಕ್ಕಿದ್ರೆ ಸದ್ಯದ ಪರಿಸ್ಥಿತಿಯಿಂದ ಪಾರಾಗಬಹುದು ಎಂಬ ಅನಿಸಿಕೆಯಿದೆ. ಗೇಟ್ ಆಚೆ ನಿಂತು ಪ್ರತಿಭಟನೆ ಮಾಡೋದು ಒಳ್ಳೆಯ ಬೆಳವಣಿಗೆಯಲ್ಲ. ಪೋಷಕರು, ಟೀಚರ್ಸ್ ಜೊತೆ ಕೂಡ ಮಾತನಾಡ್ತೀನಿ. ಕೋವಿಡ್ ನಿಂದ ಇಂತಹ ದೊಡ್ಡ ಸಮಸ್ಯೆ ಎದುರಾಗಿದೆ ಎಂದು ತಿಳಿಸಿದರು.

ಕಳೆದ 8 ತಿಂಗಳಿಂದ ಖಾಸಗಿ ಶಾಲಾ ಶಿಕ್ಷಕರು, ಶಿಕ್ಷಕರೇತರ ಸಿಬ್ಬಂದಿಗೆ ಸಮಸ್ಯೆಯಾಗಿದೆ. ಅದಕ್ಕೆ ಒಂದು ಕಂತಿನ ಶುಲ್ಕ ಕಟ್ಟಿಸಿಕೊಳ್ಳುವಂತೆ ಸೂಚನೆ ನೀಡಿದ್ದೇವೆ. ಕೆಲವೆಡೆ ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲ ಶಾಲೆಗಳು ಅರ್ಧ ಸಂಬಳ ನೀಡ್ತಿವೆ. ಇದೆಲ್ಲ ಗಮನಕ್ಕೆ ಬಂದಿದೆ. ಎಲ್ಲಾ ಸಮಸ್ಯೆಗೂ ಸೂಕ್ತ ಪರಿಹಾರ ಒದಗಿಸ್ತೀನಿ. ಲೋನ್ ಕೊಡಿಸುವ ಕುರಿತು ಸಾಧಕ-ಬಾಧಕ ಚರ್ಚಿಸಿ ಕ್ರಮ ಕೈಗೊಳ್ತೀನಿ ಎಂದು ಸಚಿವರು ಭರವಸೆ ನೀಡಿದ್ದಾರೆ.

CNG SURESH 4

Share This Article
Leave a Comment

Leave a Reply

Your email address will not be published. Required fields are marked *