ಉಡುಪಿ: ಆಕೆ ನನ್ನ ಜೀವನ ಒಂಟಿಯಾಗಿಯೇ ಮುಗಿದು ಬಿಡುತ್ತೆ ಅಂದುಕೊಂಡಿದ್ದಳು. ಮದುವೆ ವಯಸ್ಸಾದ್ರೂ ಬಲಹೀನ ಕಾಲಿಗೆ ಶಕ್ತಿಕೊಡುವ ಜಂಟಿ ಜೀವನ ನನಗಿಲ್ಲ ಅಂತ ಮರುಗಿಕೊಂಡು ಕೂತಿದ್ದಳು. ಆದರೆ ದುಬೈ ವರನೊಬ್ಬ ಮಂಕಾದ ಆಕೆಯ ಬಾಳಿಗೆ ಹಸ್ತ ಚಾಚಿ ಹಸೆಮಣೆಗೇರಿಸಿದ್ದಾನೆ.
ಹೌದು. ಉಡುಪಿಯ ಸುನಿತಾ ಪೋಲಿಯೋಗೆ ತುತ್ತಾಗಿ ಎರಡೂ ಕಾಲುಗಳಲ್ಲಿ ಶಕ್ತಿಯಿಲ್ಲದ ಯುವತಿ. ಆದರೂ ಈಕೆಯ ಕಾಲಿಗೆ ಮದರಂಗಿ, ಹಣೆಗೆ ಬಾಸಿಂಗ ಕಟ್ಟುವ ಅವಕಾಶ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಂದೀಪ್, ಸುನೀತಾ ಬಾಳಿಗೆ ಬೆಳಕು ನೀಡಿದ್ದಾರೆ.
Advertisement
Advertisement
ಪಿಯುಸಿ ಓದಿ ತಂದೆ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಸುನೀತಾ, ತನ್ನ ಕಾಲಿನಂತೆ ಬದುಕು ಕೂಡ ನಿರಾಧಾರವಾಗುತ್ತೆ ಎಂದು ಖಿನ್ನತೆಗೆ ಜಾರಿದ್ದಳು. ದುಬೈನ ಆಯಿಲ್ ಕಂಪೆನಿಯಲ್ಲಿ ಉದ್ಯೋಗ ಮಾಡುವ ಸಂದೀಪ್ ತಾನೇ ಮುಂದೆ ಬಂದು ಈಕೆಯ ಜೀವನ ಪಯಣಕ್ಕೆ ಆಧಾರವಾಗಲು ನಿರ್ಧರಿಸಿದ್ದಾರೆ.
Advertisement
ವಧು ಸುನಿತಾ ಸಹೋದರಿ ಅರುಣ ಮಾತನಾಡಿ, ನನ್ನ ತಂಗಿಗೆ ವಿವಾಹ ಭಾಗ್ಯ ಇಲ್ಲವೆಂದೇ ನಾವೆಲ್ಲ ಅಂದುಕೊಂಡಿದ್ದೆವು. ದೇವರ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇದೆ. ಇದಕ್ಕಿಂತ ಇನ್ನೊಂದು ಖುಷಿ ಬೇರೆ ಇಲ್ಲ ಎಂದರು.
Advertisement
ಉಡುಪಿಯ ಕರಂಬಳ್ಳಿ ದೇವಸ್ಥಾನದಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ. ಯುವತಿಯ ನ್ಯೂನ್ಯತೆ ಸಂದೀಪ್ ಗೆ ಅಡ್ಡಬರಲಿಲ್ಲ. ಸಂಬಂಧಿಕರ ಮೂಲಕ ಈ ಯುವತಿಯ ಬಗ್ಗೆ ವಿಚಾರಿಸಿ ತಾನೇ ಮುಂದೆ ಬಂದು ವಿವಾಹವಾಗಿದ್ದಾರೆ. ಕೊರಗುತ್ತಿದ್ದ ಸುನಿತಾ ಕುಟುಂಬ ಖುಷಿಯಾಗಿದೆ.
ಸಂಬಂಧಿ ಸದಾಶಿವ ಮಾತನಾಡಿ, ಸುನಿತಾಳನ್ನು ಯಾರು ಕೂಡ ಮದುವೆಯಾಗಲು ಮುಂದೆ ಬರುತ್ತಿರಲಿಲ್ಲ. ದುಬೈಯಲ್ಲಿ ಆಯಿಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಂದೀಪ್, ನಮ್ಮ ಕುಟುಂಬ ಸಂಪರ್ಕ ಮಾಡಿ ಮದುವೆಯಾಗುವುದಾಗಿ ಮುಂದೆ ಬಂದಿದ್ದಾರೆ. ನಮಗೆಲ್ಲ ಬಹಳ ಖುಷಿ ಎಂದರು.
ಮದುವೆ ನಂತರ ಇಬ್ಬರೂ ದುಬೈಗೆ ಹಾರಲಿದ್ದಾರೆ. ನಾನೇನು ಸಾಧನೆ ಮಾಡಿಲ್ಲ. ಪ್ರಚಾರ ಬೇಡ. ನಾನು ಮಾತನಾಡಲ್ಲ ಅಂತ ಸಂದೀಪ್ ಹೇಳಿದ್ದಾರೆ. ಸುನಿತಾ ಹೊಸಜೀವನಕ್ಕೆ ಸಂದೀಪ್ ದೀಪ ಬೆಳಗಲಿ ಎಂಬೂದು ಎಲ್ಲರ ಹಾರೈಕೆ.