– ಅಮ್ಮನ ಕಣ್ಣೀರು ಕಂಡು ತೇವಗೊಂಡ ಖಾಕಿ ಕಣ್ಗಳು
ಚಿಕ್ಕಮಗಳೂರು: ಕೊರೊನಾದಿಂದ ಮೃತಪಟ್ಟ ಮಗಳಿಗೆ ಪುಷ್ಪನಮನ ಸಲ್ಲಿಸುವ ವೇಳೆ ಮಗಳನ್ನು ನೆನೆದು ತಾಯಿ ಮಗುವಿನಂತೆ ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ. ಇದನ್ನು ಕಂಡು ನೆರೆದಿದ್ದ ಪೊಲೀಸರ ಕಣ್ಣುಗಳು ಸಹ ತೇವಗೊಂಡಿದ್ದವು.
ಜಿಲ್ಲಾ ಪೊಲೀಸ್ ವತಿಯಿಂದ ಚಿಕ್ಕಮಗಳೂರಿನ ರಾಮನಹಳ್ಳಿಯ ಡಿಎಆರ್ ಮೈದಾನದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ ವೇಳೆ ಘಟನೆ ನಡೆದಿದೆ. ಅಜ್ಜಂಪುರ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆ ಶಕುಂತಲಾ ಕೊರೊನಾದಿಂದ ಸಾವನ್ನಪ್ಪಿದ್ದರು. ಇಂದಿನ ಕಾರ್ಯಕ್ರಮಕ್ಕೆ ಮೃತ ಶಂಕುಂತಲಾ ತಾಯಿ ಕಮಲಮ್ಮನವರಿಗೂ ಆಹ್ವಾನವಿತ್ತು. ಕಾರ್ಯಕ್ರಮಕ್ಕೆ ಕಣ್ಣೀರಿಡುತ್ತಲೇ ಆಗಮಿಸಿದ್ದ ಮೃತ ಪೇದೆ ಶಕುಂತಲಾ ತಾಯಿ ಕಮಲಮ್ಮ, ಹುತಾತ್ಮ ಪೊಲೀಸರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ವೇಳೆ ಮಗಳ ನೆನೆದು ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ.
ಇದನ್ನು ಕಂಡ ಕೆಲ ಪೊಲೀಸರ ಕಣ್ಣಾಲಿಗಳು ತೇವಗೊಂಡಿವೆ. ಮಗಳ ನೆನೆದು ಕಣ್ಣೀರಿಟ್ಟ ಕಮಲಮ್ಮ ನೆಡೆದು ಹೋಗಿ ಪುಷ್ಪಾರ್ಚನೆ ಮಾಡುವ ಸ್ಥಿತಿಯಲ್ಲಿರಲಿಲ್ಲ. ಆಗ ಇಬ್ಬರು ಮಹಿಳಾ ಪೇದೆಗಳು ಕಮಲಮ್ಮನವರಿಗೆ ಸಹಾಯ ಮಾಡಿದ್ದಾರೆ. ಬಳಿಕ ಪೊಲೀಸರ ಸಹಾಯದೊಂದಿಗೆ ಪುತ್ಥಳಿ ಬಳಿ ತೆರಳಿದ ಕಮಲಮ್ಮ, ಹುತಾತ್ಮ ಪೊಲೀಸರ ಪುತ್ಥಳಿಗೆ ಹೂಗುಚ್ಛವನ್ನಿಟ್ಟು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.