ದಾವಣಗೆರೆ: ಪೊಲೀಸ್ ಸಮವಸ್ತ್ರ ಧರಿಸಿ ತಾವು ಪೊಲೀಸರು ಎಂದು ಹೇಳಿಕೊಂಡು ಜನರ ಬಳಿ ಅಪಾರ ಪ್ರಮಾಣದ ಚಿನ್ನಾಭರಣ, ಹಣ ದರೋಡೆ ಮಾಡಿದ ಇಬ್ಬರು ವ್ಯಕ್ತಿಗಳನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.
ಆರ್. ರಘು (36), ಆನಂದಬಾಬು (28) ಬಂಧಿತರು. ಆರೋಪಿಗಳಿಂದ ಮಾರುತಿ ಸುಜುಕಿ ಸ್ವಿಪ್ಟ್ ಕಾರ್ ಮತ್ತು ದರೋಡೆ ಮಾಡಿದ್ದ 5 ಗ್ರಾಂ ಬಂಗಾರದ ಉಂಗುರ, 17 ಗ್ರಾಂ ಬೆಳ್ಳಿ ಕೈ ಕಡಗ, 20 ಗ್ರಾಂ ಬೆಳ್ಳಿಯ ಚೈನ್ ಸೇರಿದಂತೆ 7,000 ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಹುಡುಕಾಟ ನಡೆಸುತ್ತಿದ್ದಾರೆ.
ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಗ್ರಾಮದ ಕೆರೆಏರಿಯ ಮೇಲೆ ಇಸ್ಪೀಟ್ ಆಡುತ್ತಿದ್ದಾಗ ನಾಲ್ಕೈದು ಜನರು ಪೊಲೀಸರ ಸೋಗಿನಲ್ಲಿ ಬಂದು 27 ಸಾವಿರ ನಗದು, 5 ಗ್ರಾಂ ಬಂಗಾರದ ಉಂಗುರ ಮತ್ತು ಬೆಳ್ಳಿ ಚೈನ್, ಕಡಗ ಹಾಗೂ ಮೊಬೈಲ್ ಗಳನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ಪ್ರಭಾಕರ್ ಎಂಬವರು ದೂರು ನೀಡಿದ್ದಾರೆ.
ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲು ಇನ್ಸ್‌ಪೆಕ್ಟರ್ ಮಧು ಪಿ.ಬಿ ಅವರ ನೇತೃತ್ವದಲ್ಲಿ ಪಿಎಸ್‍ಐ ಜಗದೀಶ್ ಅವರನ್ನೊಳಗೊಂಡ ತಂಡ ಬೇಧಿಸುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: ಬೀದರ್‌ನಲ್ಲಿ ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟಿದ ರೈತರು- 9 ಜಿಲ್ಲೆಗಳಲ್ಲಿ ಇಂದು, ನಾಳೆ ರೆಡ್ ಅಲರ್ಟ್