– ಮೆಸೆಂಜರ್ ಮೂಲಕ ಅಧಿಕಾರಿ ಸ್ನೇಹಿತನ ಬಳಿ ಬೇಡಿಕೆ
ಬಾಗಲಕೋಟೆ: ಪೊಲೀಸ್ ಅಧಿಕಾರಿ ಹೆಸರಲ್ಲೇ ನಕಲಿ ಫೇಸ್ಬುಕ್ ಅಕೌಂಟ್ ತೆರೆದು ಪೊಲೀಸರ ಹೆಸರಲ್ಲಿ ನಾಮ ಹಾಕಲು ವಂಚಕರು ಯತ್ನಿಸುತ್ತಿದ್ದು, ಬಾಗಲಕೋಟೆಯ ಹಿರಿಯ ಪೊಲೀಸ್ ಅಧಿಕಾರಿ ರವೀಂದ್ರ ಶಿರೂರ ಹೆಸರಲ್ಲಿ ನಕಲಿ ಫೇಸ್‍ಬುಕ್ ಖಾತೆ ತೆರೆದಿದ್ದಾರೆ.
ರವೀಂದ್ರ ಶಿರೂರ ಬಾಗಲಕೋಟೆ ಡಿಸಿಆರ್‍ಬಿ ಡಿವೈಎಸ್ಪಿ ಆಗಿದ್ದು, ಇವರ ಹೆಸರಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ತೆರೆದು ಮೆಸೆಂಜರ್ ಮೂಲಕ ಅವರ ಸ್ನೇಹಿತರಿಗೆ ಸಂದೇಶ ಕಳುಹಿಸಿ, ಅರ್ಜಂಟ್ ದುಡ್ಡು ಹಾಕುವಂತೆ ಬೇಡಿಕೆ ಇಟ್ಟಿದ್ದಾರೆ. ರವಿಂದ್ರ ಶಿರೂರ ಅವರ ಕೆಲ ಸ್ನೇಹಿತರಿಗೆ ಮೆಸೇಜ್ ಕಳುಹಿಸಿದ್ದು, ಚಾಟ್ ನಲ್ಲಿ ಹಣದ ಬೇಡಿಕೆ ಮಾಹಿತಿ ಬಹಿರಂಗವಾಗಿದೆ. ಫೇಸ್‍ಬುಕ್‍ನಲ್ಲಿರುವ ಅಂದಾಜು 400 ಸ್ನೇಹಿತರಿಗೆ ಮೆಸೇಜ್ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಕೆಲ ಸ್ನೇಹಿತರು ಫೋನ್ ಮಾಡಿ ಮಾಹಿತಿ ನೀಡಿದ್ದು, ತಕ್ಷಣ ಎಚ್ಚೆತ್ತ ಡಿವೈಎಸ್‍ಪಿ ರವೀಂದ್ರ ಶಿರೂರು ದೂರು ದಾಖಲಿಸಿದ್ದಾರೆ. ಯಾರಿಗೂ ದುಡ್ಡು ಹಾಕದಂತೆ ಫೋನ್ ಮೂಲಕ ಪೊಲೀಸ್ ಅಧಿಕಾರಿ ಮನವಿ ಮಾಡುತ್ತಿದ್ದಾರೆ. ನಂತರ ನಕಲಿ ಫೇಸ್‍ಬುಕ್ ಖಾತೆಯನ್ನು ರವೀಂದ್ರ ಶಿರೂರ್ ಬ್ಲಾಕ್ ಮಾಡಿಸಿದ್ದಾರೆ. ನಕಲಿ ಪೇಸ್ಬುಕ್ ಖಾತೆ ತೆರೆದಿರುವ ಬಗ್ಗೆ ಸಿಇಆರ್‍ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಕಲಿ ಫೇಸ್ಬುಕ್ ಅಕೌಂಟ್ ಮೂಲಕ ಹಣ ದೋಚಲು ಜಾಲ ತಲೆ ಎತ್ತಿದೆಯಾ ಎಂಬ ಪ್ರಶ್ನೆ ಇದೀಗ ಮೂಡಿದೆ.