ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಪೊಲೀಸರ ಕಾರ್ಯಾಚರಣೆ ಮುಂದುವರಿಸಿದ್ದು, ರಾತ್ರಿ 34ಕ್ಕೂ ಹೆಚ್ಚು ಆರೋಪಿಗಳನ್ನು ಡಿಜೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಡಿಜೆ ಹಳ್ಳಿ ಪೊಲೀಸರು ರಾತ್ರಿ ಡಿಜೆ ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಆರೋಪಿಗಳನ್ನು ಹುಡುಕಿ ಹುಡುಕಿ ಅರೆಸ್ಟ್ ಮಾಡಿದ್ದಾರೆ. ಪೊಲೀಸರು ತಡರಾತ್ರಿ 12 ಗಂಟೆಗೆ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯನ್ನ ಸುತ್ತುವರಿದಿದ್ದು, ಬೆಳಗ್ಗಿನ ಜಾವದವರೆಗೂ ಕಾರ್ಯಾಚರಣೆ ಮಾಡಿದ್ದಾರೆ. ಎಸಿಪಿ ರವಿಪ್ರಸಾದ್ ನೇತೃತ್ವದಲ್ಲಿ 34ಕ್ಕೂ ಹೆಚ್ಚು ಆರೋಪಿಗಳನ್ನ ಬಂಧಿಸಲಾಗಿದೆ. ಘಟನೆಯಲ್ಲಿ ಒಟ್ಟಾರೆ ಇದುವರೆಗೆ 290 ಹೆಚ್ಚು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ವಿಡಿಯೋಗಳನ್ನ ಪರಿಶೀಲನೆ ನಡೆಸಿ ಆರೋಪಿಗಳನ್ನು ಡಿಜೆಹಳ್ಳಿ ಪೋಲಿಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳಿಗೆ ಗಲಭೆ ವಿಡಿಯೋ ತೋರಿಸಿ ಮತ್ತೆ ಕೆಲವು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.
ಆರೋಪಿಗಳು ಪೊಲೀಸರ ಕಣ್ಣು ತಪ್ಪಿಸಲು ಮೊಬೈಲ್ ಡೇಟಾ ಡಿಲೀಟ್ ಮಾಡಿದ್ದಾರೆ. ಹೀಗಾಗಿ ಪೊಲೀಸರು ಆರೋಪಿಗಳ ಮೊಬೈಲ್ ರಿಕವರಿ ಮಾಡಲು ಫೋನ್‍ಗಳನ್ನು ತಂತ್ರಜ್ಞಾನ ತಂಡಕ್ಕೆ ರವಾನೆ ಮಾಡಿದ್ದಾರೆ. ಸದ್ಯಕ್ಕೆ ಪೊಲೀಸರು ಗಲಭೆ ದಿನ ಗ್ರೂಪ್‍ಗಳಲ್ಲಿ ರವಾನೆಯಾಗಿದ್ದ ಸಂದೇಶಗಳ ರಿಕವರಿಗೆ ಮುಂದಾಗಿದ್ದಾರೆ. ಕೆಲವು ಆರೋಪಿಗಳು ಗ್ರೂಪ್‍ಗಳಿಂದ ಎಗ್ಸಿಟ್ ಕೂಡ ಆಗಿದ್ದಾರೆ.