ಬೆಳಗಾವಿ/ಚಿಕ್ಕೋಡಿ : ಬೆಳಗಾವಿಯಲ್ಲಿ ಪೊಲೀಸರೇ ಚಿನ್ನ ಕದ್ದ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದರ ಕಿಂಗ್ ಪಿನ್ ತಾನೊಬ್ಬ ಪೊಲೀಸ್ ಅಧಿಕಾರಿ ಅಂತ ಟೋಲ್ ಗಳಲ್ಲಿ ನಕಲಿ ಐಡಿ ತೋರಿಸಿ ಓಡಾಡಿರೋದು ಈಗ ಸಾಕ್ಷಿ ಸಮೇತ ಗೊತ್ತಾಗಿದೆ.
ಕಳೆದ ವಾರ ಯಮಕನಮರಡಿ ಪೊಲೀಸ್ ಠಾಣೆಯಿಂದಲೇ ಮಾಯವಾಗಿದ್ದ ಚಿನ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಅಧಿಕಾರಿಗಳು ತಮ್ಮ ತನಿಖೆ ಮುಂದುವರಿಸಿದ್ದಾರೆ. ತನಿಖೆಯಲ್ಲಿ ವಿಚಾರಣೆಗೆ ಒಳಪಟ್ಟ ಎಲ್ಲ ಅಧಿಕಾರಿಗಳು ಮುನ್ನಲೆಗೆ ತರುತ್ತಿರೋದು ಒಂದೇ ಹೆಸರು ಕಿರಣ್ ವೀರನಗೌಡರ. ಹೌದು ಇದನ್ನ ಕೇಳಿ ಸ್ವತಃ ಸಿಐಡಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ..ಪ್ರಾಥಮಿಕ ತನಿಖೆಯಲ್ಲಿ ಅಧಿಕಾರಿಗಳಿಗೆ ಆತ ನಕಲಿ ಪೊಲೀಸ್ ಐಡಿ ಬಳಸಿ ಟೋಲ್ ಗಳಲ್ಲಿ ಓಡಾಡಿಕೊಂಡಿದ್ದು ಗೊತ್ತಾಗಿದೆ. ಅದರ ಕೆಲವೊಂದಿಷ್ಟು ಫೋಟೊ ಹಾಗೂ ಓಡಾಟದ ಮಾಹಿತಿ ಲಭಿಸಿವೆ. ತನ್ನದೆ ಮಾಲೀಕತ್ವದ ಕೆಎ 25 ಎಂಎ 0966 ಕಾರಿನಲ್ಲಿ ಈ ಕಿರಣ್ 7 ಬಾರಿ ಸಂಚರಿಸಿರುವ ಮಾಹಿತಿ ಸಿಕ್ಕಿದೆ.
ಹೈವೆ ಮೂಲಕ ನಡೆಯುತ್ತಿದ್ದ ಹವಾಲಾ ದಂಧೆ, ಕಾಲ್ ಗರ್ಲ್ಸ್, ಡ್ರಗ್ಸ್ ದಂಧೆ ಹಾಗೂ ಚಿನ್ನಾಭರಣ ಸಾಗಣೆಯ ಮಾಹಿತಿ ಪಡೆದು ತಾನೇ ಹೆದ್ದಾರಿಯಲ್ಲಿ ನಿಂತು ಗಾಡಿಗಳನ್ನ ಅಡ್ಡ ಹಾಕಿ ನಿಲ್ಲಿಸಿ ವಸೂಲಿ ಮಾಡುತ್ತಿದ್ದ ಎನ್ನಲಾಗುತ್ತಿದೆ. ಬೆಳಗಾವಿ ಉತ್ತರ ವಲಯದಲ್ಲಿ ಮಾತ್ರ ಈತನ ಧಂಧೆ ಇರದೆ ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲೂ ಸಹ ಈತನ ಧಂದೆ ಜೋರಿತ್ತು ಎನ್ನಲಾಗಿದೆ. ಅಲ್ಲದೆ ಕಳೆದ ಕೆಲವು ದಿನಗಳ ಹಿಂದೆ ಭಟ್ಕಳ ಮೂಲದ ಚಿನ್ನದ ವ್ಯಾಪಾರಿಯಿಂದ 16 ಕೆಜಿ ಚಿನ್ನ ಸಾಗಣೆ ಮಾಡಿದ್ದ ಎಂಬ ಮಾಹಿತಿಯೂ ಸಹ ಲಭ್ಯವಾಗಿದೆ.
ಇನ್ನು ಸಿಐಡಿ ಮುಂದೆ ಗೋಕಾಕ ಡಿವೈಎಸ್ಪಿ ಜಾವೇದ್ ಇನಾಮ್ದಾರ್ ತಾವು ಹಿರಿಯ ಅಧಿಕಾರಿಳು ಹೇಳಿದಂತೆ ಕೇಳಿದ್ದು, ಇದರಲ್ಲಿ ನನ್ನ ಯಾವುದೇ ಪಾಲಿಲ್ಲ ಅಂತ ಹೇಳಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಸದ್ಯ ಈ ಕಿರಣನ ಇತಿಹಾಸ ಕೆದಕುವುದರಲ್ಲಿ ಸಿಐಡಿ ಬ್ಯುಸಿಯಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮೂವರು ಅಧಿಕಾರಿಗಳನ್ನ ಇಲಾಖೆ ವರ್ಗಾವಣೆ ಶಿಕ್ಷೆ ನೀಡಿದೆ. ಆದರೆ ಪ್ರಕರಣದಲ್ಲಿ ಮುಖ್ಯವಾಗಿ ಕಾಣಿಸ್ತಿರೋ ಈ ಕಿರಣ್ ಇನ್ನು ಅರೆಸ್ಟ್ ಆಗಿಲ್ಲ. ಈತ ಎಲ್ಲಿದ್ದಾನೆ ಅನ್ನೋದು ಸಹ ಯಾರಿಗೂ ಗೊತ್ತಿಲ್ಲ. ಕೃತ್ಯದಲ್ಲಿ ಭಾಗವಹಿಸಿದ್ದಾರೆ ಎನ್ನಲಾದ ಅಧಿಕಾರಿಗಳನ್ನ ಎತ್ತಂಗಡಿ ಮಾಡಿ ಇಲಾಖೆ ಆದೇಶ ಹೊರಡಿಸಿದೆ.