ಶಿವಮೊಗ್ಗ: ಪೊಲೀಸರು ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿ ವಶಪಡೆಸಿಕೊಂಡಿದ್ದ ಬೈಕ್‍ಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ತೀರ್ಥಹಳ್ಳಿ ಪೊಲೀಸರು ಭಾನುವಾರ ಸಂಜೆ ಹುಲಿಸರ ಬಳಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಜೂಜುಕೋರುರು ಸ್ಥಳದಿಂದ ಪರಾರಿಯಾದರು. ಪೊಲೀಸರ ದಾಳಿಗೆ ಭಯಗೊಂಡ ಜೂಜುಕೋರರು ತಮ್ಮ ದ್ವಿಚಕ್ರ ವಾಹನಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದರು. ಹೀಗಾಗಿ ಪೊಲೀಸರು ನಂತರ ಗೂಡ್ಸ್ ಆಟೋ ಕೊಂಡೊಯ್ದು ಜೂಜುಕೋರರ ಐದು ಬೈಕ್‍ಗಳನ್ನು ಆಟೋದಲ್ಲಿ ತುಂಬಿಸಿಕೊಂಡು ಠಾಣೆಗೆ ತೆಗೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಎಲ್ಲಾ ಬೈಕ್‍ಗಳನ್ನು ಸೇರಿಸಿ ಹಗ್ಗವನ್ನು ಸಹ ಕಟ್ಟಲಾಗಿತ್ತು. ಆದರೆ ಹಗ್ಗ ತುಂಡಾಗಿ ಬಿದ್ದಿದ್ದರಿಂದ ಗೂಡ್ಸ್ ಆಟೋದಲ್ಲಿದ್ದ ಬೈಕ್‍ಗಳು ಕೆಳಗೆ ಬಿದ್ದು ಸ್ವಲ್ವ ದೂರದವರೆಗೆ ಉಜ್ಜಿಕೊಂಡು ಹೋಗಿವೆ. ಬೈಕ್ ಗಳು ಉಜ್ಜಿಕೊಂಡು ಹೋಗಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹತ್ತಿಕೊಂಡ ಪರಿಣಾಮ ಐದು ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನೆ ಕುರಿತು ತೀರ್ಥಹಳ್ಳಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.