ಬೆಂಗಳೂರು: ನಟ ಪ್ರಜ್ವಲ್ ದೇವರಾಜ್ 33ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು, ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಹಿನ್ನೆಲೆ ಸಂಭ್ರಮದಿಂದ ಆಚರಿಸಿಕೊಳ್ಳದಿದ್ದರೂ ಅರ್ಥಪೂರ್ಣವಾಗಿ ಬರ್ತ್‍ಡೇ ಮಾಡಿಕೊಳ್ಳುತ್ತಿದ್ದಾರೆ.
ಕೊರೊನಾ ಮಹಾಮಾರಿ ಇಂದಾಗಿ ಪೊಲೀಸರು ಇನ್ನಿಲ್ಲದ ಕಷ್ಟ ಅನುಭವಿಸುತ್ತಿದ್ದು, ಹೆಚ್ಚು ಜನರಿಗೆ ಸೋಂಕು ತಗುಲಿದ್ದರಿಂದ ಭಯದ ವಾತಾವರಣದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ನಟ ನಟಿಯರು ಬಡವರಿಗೆ, ನಿರ್ಗತಿಕರಿಗೆ ಆಹಾರ ಸೇರಿದಂತೆ ವಿವಿಧ ರೀತಿಯ ಸಹಾಯ ಮಾಡಿದರೆ, ಪ್ರಜ್ವಲ್ ದೇವರಾಜ್ ಕೊರೊನಾ ವಾರಿಯರ್ಸ್ ಗಳಾದ ಪೊಲೀಸರಿಗೆ ಪಿಪಿಇ ಕಿಟ್ ವಿತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸುವುದು ಬೇಡ ಎಂದು ವಾರದ ಹಿಂದೆ ತಮ್ಮ ಅಭಿಮಾನಿಗಳ ಬಳಿ ಪ್ರಜ್ವಲ್ ದೇವರಾಜ್ ಮನವಿ ಮಾಡಿದ್ದರು. ಕಳೆದ ಬಾರಿಯೂ ತಮ್ಮ ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಬದಲು, ಶಾಲೆಗಳಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ಎಂದು ಅಭಿಮಾನಿಗಳ ಬಳಿ ಮನವಿ ಮಾಡಿದ್ದರು. ಅದರಂತೆಯೇ ಅವರೂ ಒಂದು ಶಾಲೆಯನ್ನು ದತ್ತು ಪಡೆದಿದ್ದರು. ಆದರೆ ಈ ಬಾರಿ ಕೊರೊನಾ ವಾರಿಯರ್ಸ್‍ಗೆ ಸಹಾಯ ಮಾಡಿದ್ದಾರೆ.
View this post on Instagram
ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಗುಂಪಲ್ಲಿ ಸೇರುವುದು ಒಳ್ಳೆಯದಲ್ಲ, ಹೀಗಾಗಿ ಈ ಬಾರಿಯೂ ಹುಟ್ಟುಹಬ್ಬ ಆಚರಿಸುವುದು ಬೇಡ. ನನ್ನ ಹುಟ್ಟುಹಬ್ಬಕ್ಕೆ ತರುವ ಕೇಕ್, ಹಾರದ ಬದಲು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ಬಡವರಿಗೆ, ಅಸಹಾಯಕರಿಗೆ ಆಹಾರದ ಕಿಟ್‍ಗಳನ್ನು ನೀಡಿ ಎಂದು ಮನವಿ ಮಾಡಿದ್ದರು. ಅದರಂತೆ ಪ್ರಜ್ವಲ್ ದೇವರಾಜ್ ಸಹ ಮೆಚ್ಚುಗೆ ಕೆಲಸ ಮಾಡಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಪ್ರಜ್ವಲ್ ದೇವರಾಜ್ ಹಾಗೂ ಇನ್ಸ್ ಪೆಕ್ಟರ್ ವಿಕ್ರಂ ಚಿತ್ರ ತಂಡದಿಂದ ಪೊಲೀಸರಿಗೆ ಪಿಪಿಇ ಕಿಟ್‍ಗಳನ್ನು ನೀಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರಿಗೆ ಸುಮಾರು 200 ಪಿಪಿಇ ಕಿಟ್‍ಗಳನ್ನು ವಿತರಿಸಿದ್ದಾರೆ. ಪ್ರಜ್ವಲ್ ಅವರ ಹುಟ್ಟುಹಬ್ಬಕ್ಕೆ ಏನಾದರೂ ವಿಶೇಷ ಕೆಲಸ ಮಾಡಬೇಕು ಎಂದು ಚಿತ್ರ ತಂಡ ಅಂದುಕೊಂಡಿತ್ತಂತೆ. ಹೀಗಾಗಿ ಪಿಪಿಇ ಕಿಟ್ ವಿತರಿಸಲಾಗಿದೆ.
ಇನ್ಸ್ ಪೆಕ್ಟರ್ ವಿಕ್ರಂ ಚಿತ್ರದಲ್ಲಿಯೂ ನಾಯಕ ನಟ ಪೊಲೀಸ್ ಆಗಿರುತ್ತಾನೆ. ಹೀಗಾಗಿ ಪೊಲೀಸರಿಗೆ ಸಹಾಯ ಮಾಡುವ ಐಡಿಯಾ ಬಂತು. ಈ ಮೂಲಕ ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬವನ್ನು ಸ್ವರಣೀಯವಾಗಿಸಿದ್ದೇವೆ ಎಂದು ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕ ವಿಖ್ಯಾತ್ ಮಾಹಿತಿ ನೀಡಿದ್ದಾರೆ.