– 15 ದಿನವಾದ್ರೂ ಪತ್ತೆಯಾಗದ ಮೃತ ಯುವತಿ ಗುರುತು
– ಉಸಿರುಗಟ್ಟಿಸಿ ಕೊಂದು, ಅಂಗಾಂಗ ಕತ್ತರಿಸಿದ್ದ ಸೈಕೋ ಕಿಲ್ಲರ್
ಮಂಡ್ಯ: ಸಕ್ಕರೆ ನಾಡು ಮಂಡ್ಯ ಜನರನ್ನ ಬೆಚ್ಚಿ ಬೀಳಿಸಿದ್ದ ಅಪರಿಚಿತ ಯುವತಿಯ ಅಂಗಾಂಗ ಕತ್ತರಿಸಿ ನದಿಗೆಸೆದಿದ್ದ ಪ್ರಕರಣ ಪೊಲೀಸ್ ಇಲಾಖೆಗೆ ಕಗ್ಗಂಟಾಗಿದೆ. ಶವ ಪತ್ತೆಯಾಗಿ 15 ದಿನವಾದ್ರೂ ಮೃತ ಯುವತಿಯ ಗುರುತು ಪತ್ತೆಯಾಗಿಲ್ಲ. ಇದರಿಂದ ಕೊಲೆ ಪ್ರಕರಣ ಬೇಧಿಸಲು ಸಾಧ್ಯವಾಗಿಲ್ಲ. ಇನ್ನೊಂದೆಡೆ ಶೀಘ್ರ ಹಂತಕರನ್ನು ಪತ್ತೆ ಹಚ್ಚುವಂತೆ ಜನರ ಒತ್ತಾಯಿಸ್ತಿದ್ದಾರೆ.
Advertisement
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬಂಡಿಹೊಳೆ ಬಳಿಯ ಹೇಮಾವತಿ ನದಿಯಲ್ಲಿ ಅಪರಿಚಿತ ಯುವತಿಯ ಅಂಗಾಂಗ ಬೇರ್ಪಡಿಸಿದ್ದ ಮೃತ ದೇಹ ಪತ್ತೆಯಾಗಿ 15 ದಿನ ಕಳೆದಿದೆ. ಹಂತಕರ ಹೆಡೆಮುರಿ ಕಟ್ಟಲು ತನಿಖೆ ತೀವ್ರಗೊಳಿಸಿರುವ ಪೊಲೀಸರಿಗೆ ಯುವತಿಯ ಗುರುತು ಪತ್ತೆಯಾಗದಿರುವುದೇ ಕಗ್ಗಂಟಾಗಿ ಪರಿವರ್ತನೆಯಾಗಿದೆ.
Advertisement
Advertisement
ಏನಿದು ಪ್ರಕರಣ?:
ನವೆಂಬರ್ 17ರಂದು ಬಂಡಿಹೊಳೆ ಬಳಿಯ ತ್ರಿಶೂಲ್ ವಿದ್ಯುತ್ ಸ್ಥಾವರದ ಕಾಲುವೆಯಲ್ಲಿ ಕೈ-ಕಾಲು, ತಲೆ ಇಲ್ಲದ ಯುವತಿಯ ದೇಹ ಪತ್ತೆಯಾಗಿತ್ತು. ಕಾಲುವೆ ಗೇಟ್ ನಲ್ಲಿ ಸಿಕ್ಕ ಕಸ ತೆಗೆಯುವಾಗ ರುಂಡ ನೋಡಿದ ಸಿಬ್ಬಂದಿ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಶೋಧ ಕಾರ್ಯ ನಡೆಸಿದಾಗ ದೇಹ ಸಿಕ್ಕಿದ್ದ ಗೇಟ್ ಬಳಿಯೇ ತೊಡೆ ಭಾಗ ಸಿಕ್ಕಿದ್ರೆ, ಕಾಲುವೆಯ ಸ್ವಲ್ಪ ದೂರದಲ್ಲಿ ಕೈಕಾಲುಗಳು ಹಾಗೂ ಹೇಮಾವತಿ ನದಿಯಲ್ಲಿ ತಲೆಬುರುಡೆ ಪತ್ತೆಯಾಗಿತ್ತು.
Advertisement
ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ಪಂಚನಾಮೆಗಾಗಿ ಆಸ್ಪತ್ರೆಗೆ ರವಾನಿಸಿ, ಇನ್ನೊಂದೆಡೆ ಯುವತಿಯ ಗುರುತು ಪತ್ತೆಗೆ ಮುಂದಾಗಿದ್ದರು. ಪೊಲೀಸರು ಎಷ್ಟೇ ಹುಡುಕಿದ್ರೂ ಮೃತ ಯುವತಿ ಯಾರೆಂದು ಪತ್ತೆಯಾಗಿಲ್ಲ. ಇನ್ನು ಮೃತದೇಹದ ಪೋಸ್ಟ್ ಮಾರ್ಟಮ್ ರಿಪೋರ್ಟ್ ಪೊಲೀಸರ ಕೈ ಸೇರಿದೆ. ದುಷ್ಕರ್ಮಿಗಳು ಮೊದಲು ಯುವತಿಯನ್ನು ಉಸಿರುಗಟ್ಟಿಸಿ ಕೊಲೆಗೈದು ಬಳಿಕ ಅಂಗಾಂಗ ಕತ್ತರಿಸಿದ್ದಾರೆ ಎಂಬುದು ರಿಪೋರ್ಟ್ ನಲ್ಲಿ ಬಯಲಾಗಿದೆ.
ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿರೊ ಪೊಲೀಸರು, ಎಲ್ಲಾ ಠಾಣೆಗಳಿಗೂ 25-30 ವರ್ಷದ ಯುವತಿ ನಾಪತ್ತೆ ಪ್ರಕರಣ ವರದಿಯಾಗಿದ್ರೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಇನ್ನೊಂದೆಡೆ ಯುವತಿಯ ಕೈ ಮೇಲಿದ್ದ ಮೀನಿನ ಅಚ್ಚೆ ಗುರುತು ಆಧರಿಸಿ ಮೀನುಗಾರಿಕೆ ಕುಟುಂಬಗಳು ವಾಸಿಸುವ ಸ್ಥಳಗಳಿಗೂ ತೆರಳಿ ವಿಚಾರಿಸಿದ್ದಾರೆ. ಆದರೆ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಯುವತಿಯ ಗುರುತು ಪತ್ತೆಯಾಗದಿರೋದ್ರಿಂದ ಪ್ರಕರಣ ಭೇದಿಸಲು ಸಾಧ್ಯವಾಗುತ್ತಿಲ್ಲ.
ಇನ್ನೊಂದೆಡೆ ಪ್ರಕರಣದಿಂದ ಭೀತಿಗೊಂಡಿದ್ದ ಕೆ.ಆರ್.ಪೇಟೆ ತಾಲೂಕಿನ ಜನರಲ್ಲಿ ಇನ್ನೂ ಭಯ ಕಡಿಮೆಯಾಗಿಲ್ಲ. ಪೊಲೀಸರು ತನಿಖೆ ಚುರುಕುಗೊಳಿಸಿ ಪ್ರಕರಣ ಬೇಧಿಸಬೇಕು. ಆ ಮೂಲಕ ಜನರಲ್ಲಿ ಆವರಿಸಿರುವ ಭಯ ದೂರ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ವಿಕೃತ ಮನಸ್ಸಿನ ಹಂತಕರ ಕೃತ್ಯ ಪೊಲೀಸರಿಗೆ ತಲೆನೋವು ತರಿಸಿದೆ. ಯುವತಿಯ ಗುರುತು ಪತ್ತೆಯಾಗದಿರುವುದು ತನಿಖೆಗೆ ಹಿನ್ನಡೆಯಾಗಿದೆ.