ಚಿತ್ರದುರ್ಗ: ಪಾಳುಬಿದ್ದ ಜಮೀನಿನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿ ಅಚ್ಚರಿ ಮೂಡಿಸಿರುವ ಪ್ರಕರಣ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬುಕ್ಲಾರಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಅಚಾನಕ್ಕಾಗಿ ತಳುಕು ಪೊಲೀಸರಿಗೆ ಕರೆ ಮಾಡಿದ ಅನಾಮಧೇಯ ವ್ಯಕ್ತಿಯೋರ್ವ ಜಮೀನಿನಲ್ಲಿ ಕಂತೆ ಕಂತೆ ಹಣ ಬಿದ್ದಿರುವ ಮಾಹಿತಿ ತಿಳಿಸಿದ್ದಾನೆ. ಈ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿರುವ ತಳುಕು ಠಾಣೆಯ ಪೊಲೀಸರಿಗೆ ನಿಜಕ್ಕೂ ಅಲ್ಲಿ ಅಚ್ಚರಿ ಕಾದಿತ್ತು. ಸ್ಥಳಕ್ಕೆ ಬಂದ ಪೊಲೀಸರಿಗೆ 2000, 500, 100, ಹಾಗೂ 50 ರೂಪಾಯಿಗಳ ಕಂತೆ ಕಂತೆ ದುಡ್ಡು ಸಿಕ್ಕಿತ್ತು.
ಮೊಳಕಾಲ್ಮೂರು ಹಾಗೂ ಚಳ್ಳಕೆರೆ ಮಾರ್ಗ ಮಧ್ಯೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ನಿರ್ವಹಣೆ ಮಾಡುತ್ತಿರುವ ದಿಲೀಪ್ ಬಿಲ್ಡ್ ಕಾನ್ ಕಂಪನಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಬರೋಬ್ಬರಿ 36,60,000 ಹಣ ಕಳ್ಳತನ ಆಗಿತ್ತು. ಕಳ್ಳರು ಕಂಪನಿಯ ಕ್ಯಾಷ್ ರೂಮಿನ ಛಾವಣಿ ಮುರಿದು ಕಳ್ಳತನ ಮಾಡಿದ್ದರು. ಈ ಬಗ್ಗೆ ಕಂಪನಿ ವ್ಯವಸ್ಥಾಪಕರು ಸಹ ತಳಕು ಪೊಲೀಸ್ ಠಾಣೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು.
3 ದಿನಗಳ ಹಿಂದೆ ಕಂಪನಿಯ ಕ್ಯಾಶ್ ರೂಮಿನಲ್ಲಿ ಕಳವಾಗಿದ್ದ ಹಣದ ಪತ್ತೆಗೆ ಇಳಿದಿದ್ದ ಪೊಲೀಸರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಸಹ ವಿಚಾರಣೆಗೆ ಒಳಪಡಿಸಿದ್ದರು. ಈ ಬೆನ್ನಲ್ಲೇ ಕಂಪನಿಯ ಹಿಂದೆ ಪಾಳುಬಿದ್ದ ಜಮೀನಿನಲ್ಲಿ ಹಣ ಪತ್ತೆ ಆಗಿರೋದು ನೋಡಿದರೆ ಎಲ್ಲ ಮಾಹಿತಿ ಇರುವವರೇ ಈ ಕೃತ್ಯ ಎಸಗಿದ್ದಾರೆಂಬ ಅನುಮಾನ ಮೂಡಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.