ಬೆಂಗಳೂರು: ಬ್ರಾಹ್ಮಣ ಸಮುದಾಯಕ್ಕೆ ನೋವುಂಟು ಮಾಡಿರುವುದರಿಂದಾಗಿ ಪೊಗರು ಸಿನಿಮಾ ಪ್ರದರ್ಶನವನ್ನು ನಿಲ್ಲಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಚಿತ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾಡಿರುವ ಅವರು, ಕೆಲವರಿಗೆ ಯಾವುದೋ ಸಮಾಜಕ್ಕೆ ಅಪಮಾನ ಮಾಡುವ ಮೂಲಕ ತಮಗೆ ಪ್ರಚಾರ ಮತ್ತು ಹಣ ಸಂಪಾದನೆ ಮಾಡಬಹುದು ಎಂದು ಅಂದು ಕೊಂಡಿದ್ದಾರೆ. ಇದು ವಿಕೃತ ಮಾನಸಿಕತೆ. ಸಿನಿಮಾ ನಿರ್ಮಾಣ ಮಾಡುವಾಗಲೇ ಈ ರೀತಿಯ ದೃಶ್ಯಗಳಿಂದ ಹೆಚ್ಚು ಪ್ರಚಾರ ಪಡೆಯಬಹುದು ಎಂಬುದು ಅವರ ಮನಸ್ಸಿನಲ್ಲಿದೆ ಇದನ್ನು ಮೊದಲು ಹೊಗಲಾಡಿಸಬೇಕು. ಚಿತ್ರದ ಕೆಲವು ವಿವಾದಾತ್ಮಕ ದೃಶ್ಯಗಳನ್ನು ಮೊದಲು ಸೆನ್ಸಾರ್ ಮಾಡಿ ನಂತರ ಸಿನಿಮಾ ಪ್ರದರ್ಶನ ಮಾಡಲಿ ಎಂದು ಗುಡುಗಿದ್ದಾರೆ.
https://twitter.com/ShobhaBJP/status/1364159215695130624
ಹಿಂದೂ ಧರ್ಮದಲ್ಲಿ ಯಾವುದೇ ಜಾತಿಯನ್ನು ಟೀಕಿಸಿದರೂ ನಾವು ಏನೂ ಮಾಡುವುದಿಲ್ಲ. ಹಿಂದೂಗಳು ಶಾಂತಿ ಪ್ರಿಯರು ಎಂಬ ಭಾವನೆ ಇದೆ ಇದು ನಮ್ಮ ದೌರ್ಬಲ್ಯವಲ್ಲ. ವಿಕೃತ ಮನಸ್ಸಿನವರು ಕೂಡಲೇ ಹಿಂದೂ ಧರ್ಮಕ್ಕೆ ಮಾಡಿರುವ ಅಪಮಾನದಿಂದ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಕೆ ಕೊಟ್ಟರು.
ಧರ್ಮದ ವಿಚಾರ ಬಂದಾಗ ರಾಜಕೀಯ ಬಿಟ್ಟು ಮಾತನಾಡುತ್ತಿದ್ದೇನೆ. ಹಿಂದೂ ಧರ್ಮವನ್ನು ಹೊರತು ಪಡಿಸಿ ಬೇರೆ ಧರ್ಮದ ಕುರಿತು ಸಿನಿಮಾಗಳಲ್ಲಿ ಅಪಮಾನ ಮಾಡಿದ್ದರು ನಾನು ಪ್ರಶ್ನಿಸುತ್ತಿದ್ದೆ ಎಂದು ಹೇಳಿದರು.