– ಸಾಮರಸ್ಯಕ್ಕೆ ಮುನ್ನುಡಿ ಬರೆದ ಶ್ರೀಗಳು
ತುಮಕೂರು: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ವಿಶ್ವಸ್ಥ ಸದಸ್ಯರಾದ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು, ತುಮಕೂರು ನಗರದ ನರಸಿಂಹರಾಜ ಕಾಲೋನಿ ಮತ್ತು ಅಂಬೇಡ್ಕರ್ ನಗರದಲ್ಲಿ ಮನೆ ಮನೆ ಸಂಪರ್ಕ ಮಾಡಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಭಕ್ತರಿಂದ ನಿಧಿ ಸಂಗ್ರಹ ಮಾಡಿದ್ದಾರೆ.
ಪೇಜಾವರ ಶ್ರೀಗಳ ಭೇಟಿಯ ಹಿನ್ನೆಲೆಯಲ್ಲಿ ರಸ್ತೆಗಳನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಶ್ರೀಗಳಿಗೆ ಅಲ್ಲಿನ ನಿವಾಸಿಗಳು ಪುಷ್ಪಾರ್ಚನೆಯ ಮೂಲಕ ಸ್ವಾಗತಿಸಿದರು. ಪ್ರತಿಯೊಂದು ಮನೆಯಲ್ಲಿಯೂ ಶ್ರೀಗಳಿಗೆ ಫಲಪುಷ್ಪ ನೀಡಿ ರಾಮಮಂದಿರ ನಿರ್ಮಾಣಕ್ಕೆ ನಿಧಿ ನೀಡಿದ್ದಾರೆ.
ಪೇಜಾವರ ಶ್ರೀಗಳಿಗೆ 10ಕ್ಕೂ ಹೆಚ್ಚು ಮನೆಗಳಲ್ಲಿ ಪಾದಪೂಜೆ ನೆರವೇರಿಸಿ ಶ್ರೀರಾಮ ನಿಧಿ ಸಮರ್ಪಿಸಲಾಯಿತು. ನಂತರ ಶ್ರೀಗಳು ಕೃಷ್ಣರಾಜ ಬಡಾವಣೆಯಲ್ಲಿರುವ ಶ್ರೀ ಕೃಷ್ಣ ಮಠಕ್ಕೆ ತೆರಳಿ ಆಶೀರ್ವಚನ ನೀಡಿ ರಾಮಮಂದಿರ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಶ್ರೀರಾಮನ ಸೇವೆಗಾಗಿ ಶಬರಿ ಮತ್ತು ಗುಹನಂತೆ ಇಲ್ಲಿನ ಭಕ್ತಸಮೂಹ ತಮ್ಮ ಸೇವೆಯನ್ನು ಸಮರ್ಪಿಸಿದ್ದಾರೆ ಎಂದು ಹೇಳಿದ್ದಾರೆ.
ತದನಂತರ ನಗರದ ಶ್ರೀ ಸಿದ್ದಗಂಗಾ ಮಠದ ಸಂಜೆಯ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿ, ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಗದ್ದುಗೆಗೆ ಭೇಟಿ ನೀಡಿದರು. ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳನ್ನು ಭೇಟಿ ಮಾಡಿದರು. ಎರಡು ಮಠಗಳ ಹಿರಿಯ ಸ್ವಾಮೀಜಿಗಳು ನಡೆದುಕೊಂಡು ಬಂದ ದಾರಿಯನ್ನು ನೆನಪಿಸಿಕೊಂಡರು.