ಮಂಗಳೂರು: ಓವರ್ ಟೇಕ್ ಮಾಡುವ ನೆಪದಲ್ಲಿ ಮಂಗಳೂರಿನ ಸಿಟಿ ಬಸ್ಸೊಂದರ ಚಾಲಕ ಸಂಪತ್ ಪೂಜಾರಿಯನ್ನು ಪೆಟ್ರೋಲ್ ಸುರಿದು ಕೊಲೆ ಮಾಡಲು ಪ್ರಯತ್ನಿಸಲಾಗಿದೆ. ಇದು ಬಹಳ ಗಂಭೀರ ಪ್ರಕರಣವಾಗಿದ್ದರಿಂದ ಈ ಕೃತ್ಯವನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ಖಂಡಿಸಿದೆ.
ನಗರದಲ್ಲಿ ಓಡಾಡುವ ರೂಟ್ ನಂಬರ್ 33 ರ ಸುವರ್ಣ ಎಂಬ ಬಸ್ಸು, ಬೈಕಿಗೆ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಸವಾರ ಅಶ್ರಫ್ ಎಂಬಾತ ಬಸ್ಸಿಗೆ ಬೈಕ್ ಅಡ್ಡ ಇಟ್ಟು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಆತನಲ್ಲಿದ್ದ ಪೆಟ್ರೋಲನ್ನು ಬಸ್ ಚಾಲಕನ ಮೈ ಮೇಲೆ ಸುರಿದಿದ್ದಾನೆ. ಅಲ್ಲದೆ ಸಿಗರೇಟ್ ಲೈಟ್ ಉರಿಸಿ ಬೆಂಕಿ ಹಚ್ಚುವುದಾಗಿ ಬೆದರಿಸಿದ್ದಾನೆ. ಇದೀಗ ಬಸ್ ಚಾಲಕ ಆಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರ ಹತ್ಯೆಯ ಯತ್ನ, ಎನ್‍ಆರ್‍ಸಿ ಹೆಸರಿನಲ್ಲಿ ಗಲಭೆ, ಹನಿಟ್ರ್ಯಾಪ್, ಹಿಂದೂಗಳ ಮೇಲೆ ಹಲ್ಲೆ ಮುಂತಾದ ಗಂಭೀರವಾದ ಪ್ರಕರಣಗಳು ನಡೆಯುತ್ತಿದೆ. ಇದೀಗ ಮುಂದುವರಿದ ಭಾಗವಾಗಿ ಬಸ್ ಚಾಲಕನಿಗೆ ಪೆಟ್ರೋಲ್ ಸುರಿದು ಹತ್ಯೆ ಮಾಡಲು ಪ್ರಯತ್ನಿಸಿದ್ದನ್ನು ನೋಡುವಾಗ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಸಿರುವುದು ನಾಗರಿಕರಲ್ಲಿ ಆತಂಕ ಹುಟ್ಟಿಸಿದೆ.
ಕೊಲೆಯತ್ನಕ್ಕೆ ಒಳಗಾದ ಚಾಲಕ ಸಂಪತ್ ಪೂಜಾರಿಯನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳದ ಪ್ರಮುಖರು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಆರೋಪಿ ಅಶ್ರಫ್ ನನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್, ವಿಶ್ವ ಹಿಂದೂಪರಿಷತ್ ಜಿಲ್ಲಾ ಗೋರಕ್ಷಾ ಪ್ರಮುಖ್ ಪ್ರದೀಪ್ ಪಂಪವೆಲ್, ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಮತ್ತು ನಾಗುರಿ ಪ್ರಖಂಡ ಕಾರ್ಯದರ್ಶಿ ಶರತ್ ಕೆಂಬಾರ್ ಉಪಸ್ಥಿತರಿದ್ದರು.