ನವದೆಹಲಿ: ಲಾಕ್‍ಡೌನ್ ಅವಧಿಯಲ್ಲಿ ಪೂರ್ಣ ಪ್ರಮಾಣದ ವೇತನ ನೀಡದ ಕಂಪನಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದ ಕೇಂದ್ರದ ನಿರ್ಧಾರಕ್ಕೆ ಹಿನ್ನಡೆಯಾಗಿದೆ. ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಸುತ್ತೋಲೆ ಹೊರಡಿಸಿದ್ದ ಕೇಂದ್ರ ಗೃಹ ಇಲಾಖೆ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಗೃಹ ಇಲಾಖೆ ಸುತ್ತೋಲೆ ಪ್ರಶ್ನಿಸಿ ಖಾಸಗಿ ಕಂಪನಿಗಳು, ಕಾರ್ಖಾನೆ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಲ್. ನಾಗೇಶ್ವರ್ ರಾವ್ ನೇತೃತ್ವದ ತ್ರಿಸದಸ್ಯ ಪೀಠ ತಡೆ ನೀಡಿ ಗೃಹ ಇಲಾಖೆಗೆ ನೋಟಿಸ್ ಜಾರಿ ಮಾಡಿ ಮತ್ತಷ್ಟು ಸ್ಪಷ್ಟನೆ ನೀಡುವಂತೆ ಸೂಚಿಸಿದೆ.
Advertisement
Advertisement
ಏನಿದು ಪ್ರಕರಣ?
ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆಯಾಗಿತ್ತು. ಆರ್ಥಿಕ ಸಂಕಷ್ಟದ ಕಾರಣ ನೀಡಿ ಹಲವು ಕಂಪನಿಗಳು ಉದ್ಯೋಗಿಗಳಿಗೆ ಪೂರ್ಣ ಪ್ರಮಾಣದ ಸಂಬಳವನ್ನು ಪಾವತಿ ಮಾಡಿರಲಿಲ್ಲ.
Advertisement
ಕಾರ್ಮಿಕ ಇಲಾಖೆಗೆ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಸರ್ಕಾರ ಮಾರ್ಚ್ 29 ರಂದು ಕಂಪನಿಗಳು, ಕಾರ್ಖಾನೆಗಳು ಪೂರ್ಣ ಪ್ರಮಾಣದ ಸಂಬಳವನ್ನು ಪಾವತಿ ಮಾಡಬೇಕು ಎಂದು ಸುತ್ತೋಲೆ ಹೊರಡಿಸಿತ್ತು. ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿದರೆ ಆ ಕಂಪನಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿ ಕ್ರಮ ಕೈಗೊಳ್ಳುವುದಾಗಿ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿತ್ತು.
Advertisement
“ಸಮಾನ ಕೆಲಸಕ್ಕೆ ಸಮಾನ ವೇತನ” ಹೇಗೆ ಸರಿಯಾಗುತ್ತದೋ ಅದೇ ರೀತಿ “ಯಾವುದೇ ಕೆಲಸ ಇಲ್ಲ. ಯಾವುದೇ ಸಂಬಳವಿಲ್ಲ” ಎನ್ನುವ ನೀತಿಯೂ ಸರಿಯಾಗುತ್ತದೆ. ಲಾಕ್‍ಡೌನ್ ಅವಧಿಯಲ್ಲಿ ಉತ್ಪಾದನೆ ನಿಂತಿದೆ. ಕಾರ್ಖಾನೆಗಳು, ಉತ್ಪಾದನೆ ಘಟಕಗಳ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಪೂರ್ಣ ಪ್ರಮಾಣ ವೇತನ ನೀಡಲು ಸಾಧ್ಯವಿಲ್ಲದ ಕಾರಣ ಗೃಹ ಇಲಾಖೆ ಸುತ್ತೋಲೆಗೆ ತಡೆ ನೀಡುವಂತೆ ಕಂಪನಿಗಳು ಅರ್ಜಿಯಲ್ಲಿ ಮನವಿ ಮಾಡಿದ್ದವು.
ಕೇಂದ್ರದ ಈ ಆದೇಶವನ್ನು 52 ಕಂಪನಿಗಳು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದವು. ಲಾಕ್‍ಡೌನ್ ಘೋಷಣೆಯಾದ ಬಳಿಕ ವ್ಯವಹಾರ ಸ್ಥಗಿತಗೊಂಡಿದೆ. ಮನೆಯಿಂದಲೇ ಉದ್ಯೋಗ ನಡೆಸಿಯೂ ಸಂಬಳ ಪಾವತಿಸದಿದ್ದರೆ ಬೇರೆ ವಿಚಾರ. ಆದರೆ ಕಂಪನಿಯಲ್ಲಿ ಯಾವುದೇ ಕೆಲಸ ನಡೆಯದ ಕಾರಣ ಉತ್ಪಾದನೆ ಇಲ್ಲ. ಉತ್ಪಾದನೆ ಇಲ್ಲದ ಕಾರಣ ಸಂಬಳ ನೀಡುವುದು ಹೇಗೆ ಎಂದು ಪ್ರಶ್ನಿಸಿತ್ತು.
ಅರ್ಜಿ ವಿಚಾರಣೆ ವೇಳೆ ಪೀಠ ಲಾಕ್‍ಡೌನ್ ಅವಧಿಯಲ್ಲಿ ಎಲ್ಲ ಕಂಪನಿಗಳು ಸಂಕಷ್ಟ ಎದುರಿಸುತ್ತಿದೆ. ಗೃಹ ಇಲಾಖೆ ಆದೇಶ ಪರಿಶೀಲಿಸಬೇಕು ಎಂದು ಅಭಿಪ್ರಾಯಪಟ್ಟು ಗೃಹ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ.