ಪುಲ್ವಾಮಾ ದಾಳಿ- ಒಂದು ಮೊಬೈಲ್‍ನಿಂದ ಇಡೀ ಕೃತ್ಯದ ಮಾಹಿತಿ ಬಹಿರಂಗ

Public TV
3 Min Read
pulwama chargesheet

– 13,500 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ ಎನ್‍ಐಎ
– ಪುಲ್ವಾಮಾ ಬಳಿಕ ಮತ್ತೊಂದು ದಾಳಿಗೆ ಸಂಚು ರೂಪಿಸಿದ ಜೈಷ್ ಸಂಘಟನೆ
– ಕೋಡ್ ವರ್ಡ್ ಬದಲು, ವಾಟ್ಸಪ್ ಮೂಲಕ ಚಾಟ್

ನವದೆಹಲಿ: ದೇಶದಲ್ಲಿ ಬಾರೀ ಸಂಚಲನ ಸೃಷ್ಟಿಸಿದ ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಮಂಗಳವಾರ 13,500 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದೆ. ಒಟ್ಟು 19 ಉಗ್ರರ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ. ಈ ಘಟನೆಯಲ್ಲಿ 40 ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದರು.

pulwama chargesheet 2

ಫೆಬ್ರವರಿ 14, 2019ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಘಟನೆಯಲ್ಲಿ 40 ಸೈನಿಕರು ಸಾವನ್ನಪ್ಪಿದ್ದರು. ಈ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 19 ಉಗ್ರರ ವಿರುದ್ಧ 13,500 ಪುಟಗಳ ಚಾರ್ಜ್‍ಶಿಟ್ ಸಲ್ಲಿಕೆ ಮಾಡಲಾಗಿದೆ. ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್, ಪ್ರಕರಣದ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದ್ದು, ಇವನ ಇಬ್ಬರು ಸಹೋದರರಾದ ರೌಫ್ ಅಝರ್ ಹಾಗೂ ಮೌಲಾನಾ ಮೊಹಮ್ಮದ್ ಅಮ್ಮರ್ ಸಹ ದಾಳಿಯಲ್ಲಿ ಭಾಗಿಯಾಗಿದ್ದರು.

ಎನ್‍ಐಎ ಎಸ್‍ಪಿ ರಾಕೇಶ್ ಬಲ್ವಾಲ್ ಅವರು ಜಮ್ಮು ಕಾಶ್ಮೀರದ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದು, ಒಟ್ಟು 19 ಆರೋಪಿಗಳ ಪೈಕಿ 7 ಜನ ಎನ್‍ಐಎ ಕಸ್ಟಡಿಯಲ್ಲಿದ್ದಾರೆ. ಉಳಿದ 7 ಜನ ಸಾವನ್ನಪ್ಪಿದ್ದಾರೆ. ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ವಿವಿಧ ಗುಂಡಿನ ಚಕಮಕಿ ವೇಳೆ 7 ಉಗ್ರರು ಸಾವನ್ನಪ್ಪಿದ್ದಾರೆ. ಐವರು ಪರಾರಿಯಾಗಿದ್ದಾರೆ. ಇದರಲ್ಲಿ ಮೂವರು ಪಾಕಿಸ್ತಾನದಲ್ಲಿದ್ದಾರೆ. ಇನ್ನಿಬ್ಬರು ಭಾರತದಲ್ಲೇ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

pulwama chargesheet 3

ಎನ್‍ಐಎ ಮೊಹಮ್ಮದ್ ಉಮರ್ ಫಾರೂಖ್‍ನಿಂದ ಹೆಚ್ಚು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಮಸೂದ್ ಅಝರ್ ಅಳಿಯ ಹಾಗೂ ಐಸಿ-814 ವಿಮಾನ ಹೈಜಾಕ್ ಮಾಡಿದ್ದ ಆರೋಪಿ ಇಬ್ರಾಹಿಂ ಅಝರ್ ಮಗ ಮೊಹಮ್ಮದ್ ಉಮರ್ ಫಾರೂಖ್ ಸಹ ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ. ಉಮರ್ ಫಾರೂಖ್ ಹಾಗೂ ಐಇಡಿ ಎಕ್ಸ್‍ಪರ್ಟ್ ಎಂದೇ ಬಿಂಬಿತನಾಗಿದ್ದ ಕಮ್ರಾನ್‍ನನ್ನು ಕಳೆದ ವರ್ಷ ಮಾರ್ಚ್ 29ರಂದು ಎನ್‍ಕೌಂಟರ್ ಮಾಡಲಾಗಿದೆ.

ಮೊಬೈಲ್‍ನಿಂದಾಗಿ ಸಾಕ್ಷ್ಯಾಧಾರ ಲಭ್ಯ
ಎನ್‍ಕೌಂಟರ್ ನಡೆದ ಸ್ಥಳದಿಂದ ಜಮ್ಮು ಕಾಶ್ಮೀರ ಪೊಲೀಸರು ಮೊಬೈಲ್ ವಶಪಡಿಸಿಕೊಂಡ ಬಳಿಕ ಜೈಷ್ ಸಂಘಟನೆಯ ಪಿತೂರಿ ಬೆಳಕಿಗೆ ಬಂದಿದೆ. ಈ ಮೂಲಕ ಪ್ರಕರಣ ಪ್ರಮುಖ ತಿರುವು ಪಡೆದುಕೊಂಡಿತು. ಹೀಗಾಗಿ ಹಲವು ಸಾಕ್ಷ್ಯಗಳು ಸಿಕ್ಕವು. ಆರೋಪಿಗಳನ್ನು ಸಹ ಬೇಗ ಗುರುತಿಸಲು ಸಾಧ್ಯವಾಯಿತು.

pulwama chargesheet 4

ಫೋನ್ ಸಿಗುತ್ತಿದ್ದಂತೆ ಪ್ರಕರಣಕ್ಕೆ ವೇಗ ನೀಡಿದ ಎನ್‍ಐಎ, ಸಿಕ್ಕಿದ್ದ ಫೋನ್‍ನ್ನು ಫೊರೆನ್ಸಿಕ್ಸ್ ತಂಡಕ್ಕೆ ಕಳುಹಿಸಿತ್ತು. ಇದರಿಂದಾಗಿ ಹಲವರ ಫೋಟೋಗಳು, ವಾಟ್ಸಪ್ ಚಾಟ್ ಹಾಗೂ ವಿಡಿಯೋಗಳು ಸಿಕ್ಕಿದ್ದವು. ಈ ಮೂಲಕ ಪುಲ್ವಾಮಾ ದಾಳಿಯಲ್ಲಿ ಜೆಷ್ ಎ ಮೊಹಮ್ಮದ್ ಸಂಘಟನೆ ಪ್ರಮುಖ ಪಾತ್ರ ವಹಿಸಿರುವುದು ಬಹಿರಂಗವಾಗಿತ್ತು.

ಪುಲ್ವಾಮಾ ದಾಳಿ ವೇಳೆ ಉಮರ್ ಫಾರುಕ್ ಸೆಲ್ಫಿ ಹಾಗೂ ಸಾಂಬಾದಲ್ಲಿ ಒಳನುಸುಳುವ ಹಂತದ ವರೆಗಿನ ಹಲವು ಚಿತ್ರಗಳನ್ನು ಕ್ಲಿಕ್ಕಿಸಿದ್ದ. ಅಲ್ಲದೆ ಐಇಡಿ ಸ್ಫೋಟಗೊಂಡು ಯೋಧರು ಸಾವನ್ನಪ್ಪಿದ ಸಂಪೂರ್ಣ ಚಿತ್ರಗಳನ್ನು ಉಮರ್ ಪಾಕಿಸ್ತಾನಿ ವಾಟ್ಸಪ್ ನಂಬರ್‍ಗೆ ಕಳುಹಿಸಿದ್ದ.

Pulwama Car Indian Army 1 1

ಒಂದು ಸೆಲ್ಫಿಯಲ್ಲಿ ನಗುತ್ತಿರುವ ಮುಖಗಳ ಮೇಲೆ ಬೂದು ಬಣ್ಣದ ಐಇಡಿಗೆ ಬಳಿಸಿದ ಪುಡಿ ಇದೆ. ಈ ಕುರಿತು ಎನ್‍ಐಎ ಮಾಹಿತಿ ನೀಡಿದ್ದು, ಈ ಚಿತ್ರವನ್ನು ಫೆಬ್ರವರಿ 5, 2019ರಲ್ಲಿ ತೆಗೆದುಕೊಂಡಿದ್ದಾರೆ. ಎಡಕ್ಕಿರುವವನು ಉಮರ್ ಫಾರೂಕ್, ನಡುವೆ ಸಮೀರ್ ದಾರ್ ಹಾಗೂ ಆದಿಲ್ ಅಹ್ಮದ್ ದಾರ್(ಆತ್ಮಾಹುತಿ ಬಾಂಬರ್) ಇವರೆಲ್ಲ ಸೇರಿ ಐಇಡಿ ತಯಾರಿಸಿದ್ದಾರೆ. ಫೆಬ್ರವರಿ 6ರಂದು ಬೆಳಗ್ಗೆ ಇವರೆಲ್ಲ ಸೇರಿ ನೀಲಿ ಮಾರುತಿ ಕಾರ್‍ನಲ್ಲಿ ಸುಮಾರು 200 ಕೆ.ಜಿ. ಐಇಡಿಯನ್ನು ಫಿಟ್ ಮಾಡಿದ್ದಾರೆ.

ಫೆಬ್ರವರಿ 6ರಂದೇ ಸಿಆರ್ ಪಿಎಫ್ ಹಿಂಬಾಲಕ ವಾಹನಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಆದರೆ ಹೆಚ್ಚು ಹಿಮಪಾತದಿಂದಾಗಿ ಹೆದ್ದಾರಿ ಮುಚ್ಚಿತ್ತು. ಹೀಗಾಗಿ ಅವರ ಯೋಜನೆ ವಿಳಂಬವಾಯಿತು. ಉಮರ್ ಫೋನ್‍ನಿಂದ ಕಾಲ್ ರೆಕಾರ್ಡ್, ವಾಟ್ಸಪ್ ಚಾಟ್ಸ್, ಆರ್‍ಡಿಎಕ್ಸ್ ಸೇರಿ ಸ್ಫೋಟಕದ ಚಿತ್ರಗಳನ್ನು ಸಂಗ್ರಹಿಸಲಾಗಿದ್ದು, ಇದನ್ನೇ ಪ್ರಮುಖ ಸಾಕ್ಷಿಯನ್ನಾಗಿ ಸಲ್ಲಿಸಲಾಗಿದೆ.

pulwama

ಉಗ್ರರು ಸಂವಹನಕ್ಕಾಗಿ ಯಾವುದೇ ಕೋಡ್ ವರ್ಡ್ ಬಳಸಿಲ್ಲ. ಬದಲಿಗೆ ವಾಟ್ಸಪ್‍ನಲ್ಲಿರುವ ಎನ್‍ಕ್ರಿಪ್ಶನ್ ವೈಶಿಷ್ಟ್ಯದಿಂದ ಸಂವಹನ ನಡೆಸಿದ್ದಾರೆ ಎಂದು ಅಧಿಕಾರಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮೊಬೈಲ್‍ನಲ್ಲಿನ ವಿಡಿಯೋ ಫೂಟೇಜ್‍ಗಳು, ಒಳ ನುಸುಳುವ ಗುಂಪಿನ ಹೆಜ್ಜೆಗುರುತುಗಳ ಮೂಲಕ ಅಂತರಾಷ್ಟ್ರೀಯ ಗಡಿಯಿಂದ ಜಮ್ಮು ಕಾಶ್ಮೀರಕ್ಕೆ ಆರ್‍ಡಿಎಕ್ಸ್ ಸಾಗಿಸಿರುವುದನ್ನು ಪತ್ತೆಹಚ್ಚಿದ್ದಾರೆ. ಅಲ್ಲದೆ ಉಳಿದ ಐಇಡಿಯನ್ನು ಸ್ಥಳೀಯವಾಗಿ ಕಾಶ್ಮೀರ ಕಣಿವೆಯಿಂದ ಸಂಗ್ರಹಿಸಲಾಗಿದೆ. ಸ್ಫೋಟಕವು ಸುರಕ್ಷಿತವಾಗಿ ಜಮ್ಮು ಕಾಶ್ಮೀರಕ್ಕೆ ತಲುಪಿದೆ ಎಂದು ಜೈಷ್ ಕಮಾಂಡರ್‍ಗಳಿಗೆ ವಾಟ್ಸಪ್ ಮೂಲಕ ಮಾಹಿತಿ ನೀಡಲಾಗಿದೆ ಎಂದು ಚಾರ್ಜ್‍ಶಿಟ್‍ನಲ್ಲಿ ಎನ್‍ಐಎ ಉಲ್ಲೇಖಿಸಿದೆ.

c5blmgg terror attack in

ಪುಲ್ವಾಮಾ ದಾಳಿ ರೀತಿಯಲ್ಲೇ ಎರಡನೇ ದಾಳಿ ನಡೆಸಲು ಸಹ ಜೈಷ್ ಸಂಘಟನೆ ಯೋಜಿಸಿತ್ತು. ಆದರೆ ಬಾಲಾಕೋಟ್ ಏರ್ ಸ್ಟ್ರೈಕ್ ನಂತರ ಮಸೂದ್ ನಿರ್ದೇಶನದ ಮೇರೆಗೆ ಅದನ್ನು ಸ್ಥಗಿತಗೊಳಿಸಲಾಯಿತು ಎಂದು ಎನ್‍ಐಎ ತಿಳಿಸಿದೆ.

Share This Article