ಪುರಿ ಜಗನ್ನಾಥ ರಥಯಾತ್ರೆಗೆ ಷರತ್ತುಬದ್ಧ ಗ್ರೀನ್ ಸಿಗ್ನಲ್ ಕೊಟ್ಟ ಸುಪ್ರೀಂ

Public TV
2 Min Read
rathayatra

ನವದೆಹಲಿ: ಕೊರೊನಾ ರಣಕೇಕೆ ಮಧ್ಯೆಯೂ ಐತಿಹಾಸಿಕ ಪುರಿಯ ಜಗನ್ನಾಥ ರಥಯಾತ್ರೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಜೂನ್ 23ರಂದು ದೇವಾಲಯದ ಆವರಣದ ಒಳಗಡೆ ಮಾತ್ರ ಯಾತ್ರೆ ನಡೆಸಲು ಅವಕಾಶ ನೀಡಿದೆ. ಯಾತ್ರೆಗೆ ಅವಕಾಶ ನೀಡುವಂತೆ ಇಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಮನವಿ ಮಾಡಿತ್ತು. ಕೋಟ್ಯಂತರ ಜನರ ನಂಬಿಕೆ, ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಯಾತ್ರೆ ನಡೆಸಲು ಅನುಮತಿ ಕೊಡುವಂತೆ ಅರ್ಜಿಯಲ್ಲಿ ತಿಳಿಸಿತ್ತು.

ಪುರಿ ಜಗನ್ನಾಥ ದೇವಾಲಯದ ಆಡಳಿತದ ಅಧ್ಯಕ್ಷರು ಪುರಿಯ ಗಜಪತಿ ಮಹಾರಾಜ್ ಪ್ರಸ್ತಾಪಿಸಿದಂತೆ, ಪುರಿಗೆ ಸೀಮಿತವಾಗಿ, ಸಾರ್ವಜನಿಕರ ಹಾಜರಾತಿ ಇಲ್ಲದೇ ಯಾತ್ರೆ ನಡೆಯಬೇಕು. ರಾಜ್ಯ ಸರ್ಕಾರ ಎಲ್ಲ ವ್ಯವಸ್ಥೆಗಳನ್ನು ಮಾಡಬೇಕು. ಒಂದು ವೇಳೆ ಸೋಂಕು ಹರಡಿದರೆ ರಾಜ್ಯ ಸರ್ಕಾರವೇ ಇದಕ್ಕೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.

ಸಾರ್ವಜನಿಕರ ಆರೋಗ್ಯ ಮತ್ತು ನಾಗರಿಕ ಸುರಕ್ಷತೆಯ ಹಿತಾಸಕ್ತಿಯ ಕಾರಣದಿಂದ ಈ ವರ್ಷ ಪುರಿ ರಥಾ ಯಾತ್ರೆಯನ್ನು ಅನುಮತಿ ನೀಡುವುದಿಲ್ಲ ಜೂನ್ 18ರ ಆದೇಶದಲ್ಲಿ ತಿಳಿಸಿತ್ತು. ‘ಯಾತ್ರೆಗೆ ಅವಕಾಶ ನೀಡಿದರೆ ಅದನ್ನು ಜಗನ್ನಾಥ ಕ್ಷಮಿಸುವುದಿಲ್ಲ ಎಂದು ಸಿಜೆಐ ಬೊಬ್ಡೆ ಅವರು ಹೇಳಿದ್ದರು.

ಈ ಆದೇಶದ ಬೆನ್ನಲ್ಲೇ ಒಡಿಶಾ ಸರ್ಕಾರ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. ಕೆಲವು ಮುನ್ನೆಚ್ಚರಿಕ ಕ್ರಮಗಳೊಂದಿಗೆ ಮೆರವಣಿಗೆಯನ್ನು ನಡೆಸಲು ಸಿದ್ಧ ಎಂದು ಒಡಿಶಾ ಸರ್ಕಾರ ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮನವಿಯನ್ನು ಪುರಸ್ಕರಿಸಿ ಈಗ ಷರತ್ತುಬದ್ಧ ಅನುಮತಿ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *