ಬೆಳಗಾವಿ: ಪುತ್ರನ ವಿವಾಹ ಆರತಕ್ಷಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಖತ್ ಸ್ಟೆಪ್ಸ್ ಹಾಕಿ ಸುದ್ದಿಯಾಗಿದ್ದಾರೆ.
ಗೋವಾದ ಲೀಲಾ ಪ್ಯಾಲೇಸ್‍ನಲ್ಲಿ 4 ದಿನಗಳ ಕಾಲ ಪುತ್ರನ ವಿವಾಹ ಸಮಾರಂಭ ನಡೆದಿತ್ತು. ಈ ಸಂದರ್ಭದಲ್ಲಿ ಶಾಸಕಿ ಡ್ಯಾನ್ಸ್ ಮಾಡಿದ್ದು, ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಾಂಗ್ರೆಸ್ ಶಾಸಕಿ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹಾಗೂ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ ಸಹೋದರ ಬಿ.ಕೆ ಶಿವಕುಮಾರ್ ಪುತ್ರಿ ಡಾ. ಹಿತಾ ಅವರ ಅದ್ದೂರಿ ವಿವಾಹ ಕಳೆದ ಶುಕ್ರವಾರ ನಡೆದಿದೆ. ಕೋವಿಡ್ ಹಿನ್ನೆಲೆ ಆಪ್ತರು, ಗಣ್ಯರಿಗೆ ಮಾತ್ರ ವಿವಾಹ ಸಮಾರಂಭಕ್ಕೆ ಆಹ್ವಾನ ಮಾಡಿದ್ದರು.
ಗೋವಾದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಯು.ಟಿ.ಖಾದರ್, ಶಾಸಕ ಅಜಯ್ ಸಿಂಗ್, ಮಾಜಿ ಶಾಸಕ ಅಶೋಕ್ ಪಟ್ಟಣ್, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.