ಕಾರವಾರ: ಕೊರೊನಾ ಮಹಾಮಾರಿಯಿಂದ ಈ ಬಾರಿ ಪಿತೃಕಾರ್ಯ ಮಾಡಿಸಲು ಗೋಕರ್ಣ ಕ್ಷೇತ್ರಕ್ಕೆ ಬರುವವರ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರವು ಮಹಾಬಲೇಶ್ವರನ ಆತ್ಮಲಿಂಗದ ಮೂಲಕ ವಿಶ್ವ ಪ್ರಸಿದ್ಧಿ ಪಡೆದಿದೆ. ಇಲ್ಲಿ ಪಿತೃ ಕಾರ್ಯಗಳನ್ನು ನಡೆಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಆಸ್ತಿಕರದ್ದು. ಹೀಗಾಗಿಯೇ ಈ ಕ್ಷೇತ್ರಕ್ಕೆ ಮುಕ್ತಿ ಕ್ಷೇತ್ರವೆಂಬ ಹೆಸರು ಇದೆ. ಇಲ್ಲಿ ಅಸ್ತಿ ವಿಸರ್ಜನೆಗೆ ಅರಬ್ಬಿ ಸಮುದ್ರ, ಪಿಂಡದಾನ ಅರ್ಘ್ಯಕ್ಕೆ ಪಿತೃಸ್ಥಾಲೇಶ್ವರ, ತಾಮ್ರಪರ್ಣಿ ಕೆರೆ ಇದ್ದು ಪಿತೃಕಾರ್ಯಕ್ಕಾಗಿ ವಿಶೇಷ ಸ್ಥಾನಗಳಿವೆ.
ಪ್ರತಿ ವರ್ಷ ಭಾದ್ರಪದ ಕೃಷ್ಣ ಪ್ರತಿಪದೆಯಿಂದ ಅಮವಾಸ್ಯೆಯವರೆಗೆ ಬಹುಳ ಪಕ್ಷವನ್ನು ಸಮಸ್ತ ಪಿತೃಗಳಿಗೆ ಸಮರ್ಪಿಸಲಾಗುತ್ತದೆ. ಈ ಬಾರಿ ಸೆಪ್ಟೆಬರ್ 3 ರಿಂದ ಸೆಪ್ಟೆಂಬರ್ 17ರ ವರೆಗೆ ಪಿತೃಪಕ್ಷವಿದೆ. ಪ್ರತಿ ವರ್ಷ ಪಿತೃಪಕ್ಷದಂದ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರನ ಸನ್ನಿಧಿಗೆ ರಾಜ್ಯ ಮತ್ತು ಹೊರ ರಾಜ್ಯದಿಂದ ಲಕ್ಷ ಲಕ್ಷ ಜನ ಬರುವ ಮೂಲಕ ತಮ್ಮ ಕುಟುಂಬದವರ ಪಿತೃಕಾರ್ಯ ನೆರವೇರಿಸುತಿದ್ದರು.
ನಿರ್ಬಂಧ ಮುಂದುವರಿಕೆ:
ರಾಮಚಂದ್ರಾಪುರ ಮಠದ ನೇತೃತ್ವದಲ್ಲಿ ನಡೆಯುತ್ತಿರುವ ಗೋಕರ್ಣದ ಪುರಾಣ ಪ್ರಸಿದ್ಧ ಮಹಾಬಲೇಶ್ವರನ ಆತ್ಮ ಲಿಂಗ ಸ್ಪರ್ಶ ಪೂಜೆಗೆ ಆಡಳಿತ ಮಂಡಳಿ ನಿರ್ಬಂಧ ವಿಧಿಸಿದೆ.
ಆತ್ಮಲಿಂಗ ಸ್ಪರ್ಶಿಸಿ ಪೂಜೆ ಮಾಡುವುದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆಗಳಿದ್ದು ಈ ಹಿನ್ನೆಲೆಯಲ್ಲಿ ಇಲ್ಲಿನ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ. ಈ ಹಿಂದೆ ಸ್ಥಳೀಯರಿಗೆ ಮಾತ್ರ ದೇವಸ್ಥಾನದ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈಗ ಪ್ರವಾಸಿಗರಿಗೂ ಅವಕಾಶ ಕಲ್ಪಿಸಿದ್ದು ನಂದಿ ಮಂಟಪದವರೆಗೆ ಮಾತ್ರ ತೆರಳಿ ದೇವರ ದರ್ಶನ ಮಾಡಬಹುದಾಗಿದೆ.
ರಸ್ತೆಗಳು ಬಿಕೋ:
ಗೋಕರ್ಣದಲ್ಲಿ ಪಿತ್ರಪಕ್ಷದ ಸಂದರ್ಭದಲ್ಲಿ ರಾಜ್ಯ, ಹೊರರಾಜ್ಯದಿಂದ ಬರುವ ಸಾವಿರಾರು ಭಕ್ತರು ಇಲ್ಲಿ ಮಹಾಲಯ ಆಚರಿಸುತ್ತಿದ್ದರು. ಈ ಮೂಲಕ ಮೂಲಕ ತಮ್ಮ ಪಿತೃವಿಗೆ ಶಾಶ್ವತ ಸ್ವರ್ಗ ಸಿಗುವ ಹಾಗೂ ಆತ್ಮ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆಯಿಂದ ಪೂಜಾಕಾರ್ಯ ಹಾಗೂ ಅಸ್ತಿ ವಿಸರ್ಜನೆ ಮಾಡುತಿದ್ದರು. ಈ ಬಾರಿ ಪಿತೃಕಾರ್ಯ ಮಾಡಿಸುವವರ ಸಂಖ್ಯೆ ಸಂಪೂರ್ಣ ಇಳಿಮುಖವಾಗಿದ್ದು ಸುತ್ತಮುತ್ತಲ ಜಿಲ್ಲೆಯವರು ಮಾತ್ರ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಆದರೆ ಹೊರ ರಾಜ್ಯವಾದ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರ ಪ್ರದೇಶದಿಂದ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದ್ದು ಕೊರೊನಾ ಭಯ ಕ್ಷೇತ್ರಕ್ಕೆ ಬರುವವರ ಸಂಖ್ಯೆಯನ್ನು ತಗ್ಗಿಸಿದೆ. ಹೀಗಾಗಿ ಸದಾ ಜನಜಂಗುಳಿಯಿಂದ ಗಿಜಿಗುಡುತಿದ್ದ ಗೋಕರ್ಣ ಈಗ ಬಿಕೋ ಎನ್ನುತಿದ್ದು ಬೆರಳೆಣಿಕೆಯ ಭಕ್ತರು ಮಾತ್ರ ಕ್ಷೇತ್ರ ದರ್ಶನ ಮಾಡಿ ಪಿತೃಕಾರ್ಯ ನಡೆಸುತ್ತಿದ್ದಾರೆ.