ಮಡಿಕೇರಿ: ಪಿಕಪ್ ಮತ್ತು ಓಮ್ನಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಭೇತ್ರಿಯಲ್ಲಿ ನಡೆದಿದೆ.
ಮೃತರನ್ನು ಮೂರ್ನಾಡು ಗ್ರಾಮದ ಹರೀಶ್(45) ಮತ್ತು ಅದೇ ಗ್ರಾಮದ ಸುಬ್ರಹ್ಮಣಿ(42) ಎಂದು ಗುರುತಿಸಲಾಗಿದೆ. ಪಿಕಪ್ ಬಂದು ಗುದ್ದಿದ ರಭಸಕ್ಕೆ ಓಮ್ನಿ ನಜ್ಜುಗುಜ್ಜಾಗಿದೆ. ವಾಹನ ಹಿಂದಿಕ್ಕುವ ರಭಸದಲ್ಲಿ ಓಮ್ನಿ ವಾಹನ ರಸ್ತೆ ಬದಿಯ ಬರೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಳಿಕ ಪಿಕಪ್ ಓಮ್ನಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿ ರಭಸಕ್ಕೆ ಓಮ್ನಿ ನಜ್ಜುಗುಜ್ಜಾಗಿದ್ದು, ಪಿಕಪ್ ವಾಹನ ಉರುಳಿ ಬಿದ್ದಿದೆ. ಓಮ್ನಿ ಚಲಾಯಿಸುತ್ತಿದ್ದ ಹರೀಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇತ್ತ ಘಟನೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಸುಬ್ರಹ್ಮಣಿಯನ್ನು ಚಿಕಿತ್ಸೆಗೆಂದು ಮಡಿಕೇರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುಬ್ರಹ್ಮಣಿ ಕೂಡ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.