ಮುಂಬೈ: ಐಪಿಎಲ್‍ನಲ್ಲಿ ಕೋಲ್ಕತ್ತಾ ತಂಡದ ಪರ ಆಡುತ್ತಿರುವ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಭಾರತದಲ್ಲಿ ವೇಗವಾಗಿ ಹಬ್ಬುತ್ತಿರುವ ಕೊರೊನಾ ಎರಡನೇ ಅಲೆಯ ನಡುವೆ ಭಾರತದಲ್ಲಿ ತಲೆದೂರಿರುವ ಆಕ್ಸಿಜನ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಿ ನಿಧಿಗೆ 50,000 ಡಾಲರ್ (37 ಲಕ್ಷ ರೂ.) ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಕಮ್ಮಿನ್ಸ್, ನಾನು ಭಾರತ ದೇಶವನ್ನು ತುಂಬಾ ಇಷ್ಟಪಡುತ್ತೇನೆ. ಕಳೆದ ಹಲವು ವರ್ಷಗಳಿಂದ ನಾನು ಭಾರತಕ್ಕೆ ಬರುತ್ತಿದ್ದೇನೆ. ಬಂದಾಗಲೆಲ್ಲಾ ಇಲ್ಲಿನ ಜನ ಪ್ರೀತಿ, ವಾತ್ಸಲ್ಯದಿಂದ ಸಲಹುತ್ತಿದ್ದಾರೆ. ಆದರೆ ಇದೀಗ ಕೊರೊನಾ ಮಹಾಮಾರಿಯಿಂದ ಜನ ಬಳಲುತ್ತಿದ್ದಾರೆ. ಇದನ್ನು ಕಂಡು ನನಗೆ ತುಂಬಾ ದುಖಃವಾಗುತ್ತಿದೆ ಎಂದಿದ್ದಾರೆ.
— Pat Cummins (@patcummins30) April 26, 2021
ಭಾರತದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಆದರೂ ಕೂಡ ಐಪಿಎಲ್ ಪಂದ್ಯಾಟಗಳು ನಡೆಯುತ್ತಿರುವುದನ್ನು ಕಂಡು ನಾನು ಭಾರತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇದರೊಂದಿಗೆ ಭಾರತೀಯರಿಗೆ ಲಾಕ್‍ಡೌನ್ ಮಧ್ಯೆ ಕೆಲ ಕಾಲ ವಿಶ್ರಾಂತಿ ಮತ್ತು ಮನರಂಜನೆಯನ್ನು ನೀಡಲು ಐಪಿಎಲ್ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಾನೊಬ್ಬ ಆಟಗಾರನಾಗಿ ನನ್ನನ್ನು ಇಷ್ಟಪಡುವ ಜನರಿಗೆ ಸಹಾಯದ ಹಸ್ತ ಚಾಚಲು ಬಯಸುತ್ತೇನೆ. ಹಾಗಾಗಿ ಭಾರತದ ಪ್ರಧಾನಿ ಅವರ ನಿಧಿಗೆ ದೇಣಿಗೆ ನೀಡಲು ಬಯಸುತ್ತೇನೆ. ಪ್ರಮುಖವಾಗಿ ಭಾರತದ ಆಸ್ಪತ್ರೆಗಳಿಗೆ ಆಕ್ಸಿಜನ್ ಖರೀದಿಗಾಗಿ ಈ ಹಣ ನೀಡಲು ಮುಂದಾಗಿದ್ದೇನೆ. ನಾನು ಇತರ ಐಪಿಎಲ್‍ನ ಸಹ ಆಟಗಾರರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲು ಮನವಿ ಮಾಡುತ್ತೇನೆ. ನಾನು ಈಗಾಗಲೇ 50,000 ಡಾಲರ್ ಗಳನ್ನು ದೇಣಿಗೆಯಾಗಿ ನೀಡಿದ್ದೇನೆ ಎಂದು ತಿಳಿಸಿದರು.
ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವ ಕಮ್ಮಿನ್ಸ್ ಈ ಬಾರಿಯ ಐಪಿಎಲ್‍ನಲ್ಲಿ 5 ಪಂದ್ಯಗಳಿಂದ 5 ವಿಕೆಟ್ ಪಡೆದರೆ ಬ್ಯಾಟಿಂಗ್‍ನಲ್ಲಿ ಒಟ್ಟು 82 ರನ್ ಸಿಡಿಸಿ ತಂಡಕ್ಕೆ ಆಧಾರವಾಗಿದ್ದಾರೆ. ಕಮ್ಮಿನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ 66ರನ್ (34 ಎಸೆತ, 4 ಬೌಂಡರಿ, 6ಸಿಕ್ಸ್) ಸಿಡಿಸಿ ಮಿಂಚಿದ್ದರು.