ಶಿವಮೊಗ್ಗ: ಮಹಾನಗರ ಪಾಲಿಕೆ ಅಧಿಕಾರಿಗಳು ಅಂಗಡಿ ತೆರವುಗೊಳಿಸಿದ್ದಕ್ಕೆ ಮನನೊಂದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ಮಾಡಿದ್ದಾರೆ.
ಶಿವಮೊಗ್ಗ ವಿನೋಬನಗರದ 60 ಅಡಿ ರಸ್ತೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 4 ಅಂಗಡಿಗಳನ್ನು ಕಳೆದ 19ರಂದು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದರು. ಇದರಿಂದ ಮನನೊಂದ ಇಸ್ತ್ರಿ ಅಂಗಡಿ ನಡೆಸುತ್ತಿದ್ದ ಚಂದ್ರಶೇಖರ್ ಕಳೆದ 2 ದಿನದ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದರು. ಚಂದ್ರಶೇಖರ್ ಸಾವಿಗೆ ಪಾಲಿಕೆ ಸಿಬ್ಬಂದಿಯೇ ನೇರ ಹೊಣೆ. ಹೀಗಾಗಿ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಇಂದು ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ ಹಲವು ವರ್ಷಗಳಿಂದ ಮಹಾನಗರ ಪಾಲಿಕೆಗೆ ಸೇರಿದ ಜಾಗದಲ್ಲಿ ತರಕಾರಿ ಅಂಗಡಿ, ಟೀ ಕ್ಯಾಂಟೀನ್ ಹಾಗೂ ಇಸ್ತ್ರಿ ಅಂಗಡಿಗಳನ್ನು ಇಟ್ಟುಕೊಂಡು 4 ಕುಟುಂಬಗಳು ಜೀವನ ಸಾಗಿಸುತ್ತಿದ್ದವು. ಆದರೆ ಮಹಾನಗರ ಪಾಲಿಕೆ ಸಿಬ್ಬಂದಿ ಕಳೆದ 8 ದಿನದ ಹಿಂದೆ ಏಕಾಏಕಿ ಅಂಗಡಿಗಳನ್ನು ತೆರವುಗೊಳಿದ್ದರು. ಕೊರೊನಾ ವೇಳೆ ಜೀವನ ಸಾಗಿಸುವುದೇ ಕಷ್ಟಕರವಾಗಿತ್ತು. ಇಂತಹ ಸಮಯದಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದ ಚಂದ್ರಶೇಖರ್ ಅವರಿಗೆ ಅಂಗಡಿ ತೆರವು ಮಾಡಿದ್ದು ಮತ್ತಷ್ಟು ಆತಂಕಕ್ಕೀಡು ಮಾಡಿತ್ತು.
ಮಹಾನಗರ ಪಾಲಿಕೆ ಅಂಗಡಿ ತೆರವುಗೊಳಿಸಿದ್ದರಿಂದ ಮುಂದೆ ಜೀವನ ನಡೆಸುವುದು ಹೇಗೆ ಎಂಬ ಯೋಚನೆಯಿಂದಾಗಿಯೇ ಚಂದ್ರಶೇಖರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆದ್ದರಿಂದ ಮಹಾನಗರ ಪಾಲಿಕೆ ಅಧಿಕಾರಿಗಳು ಚಂದ್ರಶೇಖರ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಒಂದು ವೇಳೆ ಪಾಲಿಕೆ ಪರಿಹಾರ ನೀಡದೇ ಹೋದರೆ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆದುವುದಾಗಿ ಎಚ್ಚರಿಕೆ ನೀಡಿದ್ದಾರೆ.