ನೆಲಮಂಗಲ: ಪಾರ್ಕ್ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಸಿದ್ಧವಾಗಿರುವ ಅಧಿಕಾರಿಗಳ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲ ನಗರದ ವಿಜಯ ವಿಠ್ಠಲ ಬಡಾವಣೆಯಲ್ಲಿ ಇರುವ ಪಾರ್ಕ್ ತೆರವುಗೊಳಿಸಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ರಾತ್ರೋರಾತ್ರಿ ಮನೆ ನಿರ್ಮಾಣಕ್ಕೆ ತಯಾರಿನಡೆಸಲಾಗಿತ್ತು. ಕೆಲಸಕ್ಕಾಗಿ ಬಂದಿರುವ ಜೆಸಿಬಿ ಯಂತ್ರವನ್ನು ಸ್ಥಳೀಯರು ತಡೆದಿದ್ದಾರೆ.
ಈಗಾಗಲೇ ನೆಲಮಂಗಲ ನಗರಸಭೆ ಹಾಗೂ ನೆಲಮಂಗಲ ಯೋಜನಾ ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಆದರೆ ಜನರಿಗೆ ಯಾವುದೇ ಉತ್ತರ ಸಿಕ್ಕಿಲ್ಲ ಎಂದು ಸ್ಥಳೀಯ ನಿವಾಸಿ ಚಂದ್ರಯ್ಯ, ಪ್ರಸಾದ್, ಮಧುಸೂದನ್ ಆರೋಪಿಸಿದ್ದಾರೆ. ದೂರು ನೀಡಿದ್ರು ಅಧಿಕಾರಿಗಳು ಸರ್ಕಾರಿ ಜಾಗ ಉಳಿಸುವಲ್ಲಿ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಜನರು ಆರೋಪ ಮಾಡುತ್ತಿದ್ದಾರೆ. ಬಡಾವಣೆಯ ಜನರಿಗೆ ನ್ಯಾಯ ನೀಡಿ ಪಾರ್ಕ್ ಉಳಿಸುವಂತೆ ಆಗ್ರಹಿಸಿದ್ದಾರೆ.
ಪುರಸಭೆಯಾಗಿದ್ದ ನೆಲಮಂಗಲ ಟೌನ್ ನಗರಸಭೆಯಾಗಿ ಮೇಲ್ ದರ್ಜೆಗೆ ಏರಿ ಕಾರ್ಯರೂಪಕ್ಕೆ ಬಂದಿದೆ. ಇದರ ನಡುವೆ ನಾಲ್ಕು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಡಾವಣೆಗಳು ನಗರಸಭೆ ವ್ಯಾಪ್ತಿಯಲ್ಲಿ ಬರುತ್ತದೆ. ಈ ಬಡುವೆ ನಿವೇಶನಗಳ ಬೆಲೆ ಗಗನಕ್ಕೇರಿದೆ, ಇದನ್ನೆ ಮುಂದಿಟ್ಟುಕೊಂಡ ಕೆಲವರು ಪಾರ್ಕ್ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.