– ಜಮೀರ್ ಅಹ್ಮದ್ ಮಾಲೀಕತ್ವದ ಬಸ್‍ನಲ್ಲಿ ಬಂದ ಪುಂಡರು
ಬೆಂಗಳೂರು: ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಪಾದರಾಯನಪುರ ಪುಂಡರಿಗೆ ರಾಜ ಮರ್ಯಾದೆಯೊಂದಿಗೆ ಸ್ವಾಗತ ಕೋರಲಾಗಿದೆ.
ಪಾದರಾಯನಪುರದಲ್ಲಿ ಪೊಲೀಸರ ಮೇಲೆ ಹಲ್ಲೆ ಎಸೆಗಿದ್ದ ಪ್ರಕರಣದ ಎಲ್ಲಾ 126 ಆರೋಪಿಗಳಿಗೂ ಹೈಕೋರ್ಟ್ ಮೇ 29ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆರೋಪಿಗಳು 1 ಲಕ್ಷ ರೂ. ಬಾಂಡ್, ಶ್ಯೂರಿಟಿ ಒದಗಿಸಬೇಕು ಎಂದು ನ್ಯಾಯಾಧೀಶರಾದ ಜಾನ್ ಮೈಕೆಲ್ ಕುನ್ಹಾ ಅವರ ನೇತೃತ್ವದ ನ್ಯಾಯಪೀಠವು ಆದೇಶ ಹೊರಡಿಸಿತ್ತು. ಕೋರ್ಟ್ ಆದೇಶದ ಬೆನ್ನಲ್ಲೇ ಪೊಲೀಸರು ಹಳೇಗುಡ್ಡದಹಳ್ಳಿಯ ಹಜ್ ಭವನದಲ್ಲಿ ಆರೋಪಿಗಳನ್ನು ಇರಿಸಿ ಕೊರೊನಾ ಟೆಸ್ಟ್ ಮಾಡಿಸಿ, ಎಲ್ಲಾ ಪ್ರಕ್ರಿಯೆ ಬಳಿಕ ಇಂದು ಬಿಡುಗಡೆ ಮಾಡಿದರು.
Advertisement
Advertisement
ಆರೋಪಿಗಳನ್ನು ಕರೆದೊಯ್ಯಲು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರ ಮಾಲೀಕತ್ವದ ಬಸ್ ಹಳೇಗುಡ್ಡದಹಳ್ಳಿಯ ಹಜ್ ಭವನಕ್ಕೆ ಬಂದಿತ್ತು. ಅಷ್ಟೇ ಅಲ್ಲದೆ ಅವರನ್ನು ಸ್ವಾಗತಿಸಲು ಸ್ವತಃ ಜಮೀರ್ ಅಹ್ಮದ್ ಹಾಗೂ ಆರೋಪಿಗಳ ಕುಟುಂಬಸ್ಥರು ನ್ಯಾಷನಲ್ ಟ್ರಾವೆಲರ್ಸ್ ನ ಮೂರು ಬಸ್‍ಗಳಲ್ಲಿ ಆಗಮಿಸಿದ್ದರು. ಇದರಿಂದಾಗಿ ಜಮಾಯಿಸಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
Advertisement
Advertisement
ಹಣ: ಮುಸ್ಲಿಂ ಸಮುದಾಯದ ಅಲ್ತಾಫ್ ಖಾನ್ ರಿಲೀಸ್ ಆದವರಿಗೆ ಸ್ಯಾನಿಟೈಸರ್ ಕೊಟ್ಟು ಮನೆಗೆ ಕಳುಹಿಸಿದರು. ಇತ್ತ ಖುದ್ದು ಮುಂದೆ ನಿಂತು ಸ್ವಾಗತಿಸಿದ ಜಮೀರ್ ಅಹ್ಮದ್, “ದೇವರು ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ” ಎಂದು ಆರೋಪಿಗಳನ್ನು ಹಾರೈಸಿದರು. ಬಳಿಕ ಅವರಿಗೆ ಹಣ ಕೊಟ್ಟು, ಬಸ್ ನಲ್ಲಿ ಹತ್ತಿಸಿ ಕಳುಹಿಸಿಕೊಟ್ಟಿದ್ದಾರೆ. ಜೊತೆಗೆ ಜಮೀರ್ ಅಹ್ಮದ್ ಅವರೇ 1.26 ಕೋಟಿ ರೂ. ಬಾಂಡ್, ಶ್ಯೂರಿಟಿಯನ್ನು ಕೋರ್ಟಿಗೆ ನೀಡಿ ಪಾದರಾಯನಪುರ ಪುಂಡರಿಗೆ ಜಾಮೀನು ಕೊಡಿಸಿದ್ದಾರೆ ಎನ್ನಲಾಗುತ್ತಿದೆ.
ಏನಿದು ಪ್ರಕರಣ:
ಪಾದರಾಯನಪುರದಲ್ಲಿ ಚೆಕ್ ಪೋಸ್ಟ್ ನಾಶ ಮಾಡಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಬೆಂಗಳೂರಿನಲ್ಲೇ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಇರ್ಫಾನ್‍ನನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು.
ಆರೋಪಿಗಳ ಪರ ವಕೀಲ ಇಸ್ಮಾಯಿಲ್ ಜಬೀವುಲ್ಲಾ ಅವರು ಕಕ್ಷಿದಾರರಿಗೆ ಜಾಮೀನು ನೀಡುವಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕುರಿತು ವಿಚಾರಣೆ ನಡೆಸಿ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಇರ್ಫಾನ್ ಯಾರು?:
ಕೆಎಫ್‍ಡಿಯ ಇರ್ಫಾನ್ ಕೇವಲ ಕೆಎಫ್‍ಡಿನಲ್ಲಿ ಇರಲಿಲ್ಲ. ಕಳೆದ ಬಾರಿ ಎಸ್‍ಡಿಪಿಐಯಿಂದ ಕಾರ್ಪೋರೇಷನ್ ಎಲೆಕ್ಷನ್‍ಗೆ ನಿಂತು ಸೋತಿದ್ದ. ಈ ಮೂಲಕ ಎಸ್‍ಡಿಪಿಐನಲ್ಲಿ ಕೂಡ ಗುರುತಿಸಿಕೊಂಡಿದ್ದ. ಹಾಲಿ ಕಾರ್ಫೊರೇಟರ್ ಇಮ್ರಾನ್ ಪಾಷಾ ವಿರುದ್ಧ ತೊಡೆ ತಟ್ಟೋದೆ ಈತನ ಉದ್ದೇಶವಾಗಿತ್ತು.