ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟರ್, ಓಪನರ್ ಬ್ಯಾಟ್ಸ್‌ಮನ್ ತೌಫೀಕ್ ಉಮರ್ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ.
ಜ್ವರ ಕಾಣಿಸಿಕೊಂಡಿದ್ದರಿಂದ ತೌಫೀಕ್ ಅವರು ಶನಿವಾರ ಕೋವಿಡ್-19 ಟೆಸ್ಟ್‌ಗೆ ಒಳಗಾಗಿದ್ದರು. ಭಾನುವಾರ ಸಂಜೆ ಅವರ ರಿಪೋರ್ಟ್ ಪಾಸಿಟಿವ್ ಬಂದಿದ್ದು, ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Advertisement
Advertisement
“ಶುಕ್ರವಾರ ರಾತ್ರಿ ಸ್ವಲ್ಪ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು. ನಂತರ ಕೊರೊನಾ ಟೆಸ್ಟ್ ಮಾಡಿಸಿಕೊಂಡೆ. ಈ ವೇಳೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ನನ್ನಲ್ಲಿ ಕೊರೊನಾ ಗುಣಲಕ್ಷಣಗಳು ತೀವ್ರವಾಗಿಲ್ಲ” ಎಂದು ತೌಫೀಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement
2001ರಲ್ಲಿ ಪಾಕಿಸ್ತಾನ ಪರ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ತೌಫೀಕ್, 13 ವರ್ಷದ ವೃತ್ತಿಜೀವನದಲ್ಲಿ 44 ಟೆಸ್ಟ್ ಮತ್ತು 22 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‍ನಲ್ಲಿ 37.98 ಸರಾಸರಿಯಲ್ಲಿ 2,963 ರನ್ ಗಳಿಸಿದರೆ, ಏಕದಿನ ಕ್ರಿಕೆಟ್‍ನಲ್ಲಿ ಕೇವಲ 504 ರನ್ ಗಳಿಸಿದ್ದಾರೆ.
Advertisement
ಕೊರೊನಾದಿಂದಾಗಿ ವಿಶ್ವಾದ್ಯಂತ ಅನೇಕ ಟೂರ್ನಿಗಳು ಮುಂದೂಡಲ್ಪಟ್ಟಿವೆ, ಇನ್ನು ಕೆಲವು ರದ್ದುಗೊಂಡಿವೆ. ಕೋವಿಡ್-19 ಸಾಂಕ್ರಾಮಿಕ ರೋಗವು ಜಾಗತಿಕ ಕ್ರೀಡಾ ಕ್ಯಾಲೆಂಡರ್‍ನಲ್ಲಿ ಪ್ರಮುಖ ಪರಿಣಾಮ ಬೀರಿದೆ. ಟೋಕಿಯೊ ಒಲಿಂಪಿಕ್ಸ್, ವಿಂಬಲ್ಡನ್ ಟೆನ್ನಿಸ್ ಸೇರಿದಂತೆ ಹಲವಾರು ಪ್ರಮುಖ ಪಂದ್ಯಾವಳಿಗಳು ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಮುಂದೂಡಲ್ಪಟ್ಟಿವೆ ಅಥವಾ ರದ್ದುಗೊಂಡಿವೆ.
ಕೊರೊನಾ ವೈರಸ್‍ನಿಂದಾಗಿ ಕ್ರಿಕೆಟ್ ಸಹ ಪರಿಣಾಮ ಬೀರಿದೆ. ಅನೇಕ ಪ್ರವಾಸಗಳನ್ನು ಈಗಾಗಲೇ ಮುಂದೂಡಲಾಗಿದೆ ಅಥವಾ ರದ್ದುಪಡಿಸಲಾಗಿದೆ. ಪಾಕಿಸ್ತಾನ ಸೂಪರ್ ಲೀಗ್ ಅನ್ನು ಫೈನಲ್ ಪಂದ್ಯದಲ್ಲೇ ರದ್ದುಗೊಳಿಸಲಾಗಿದೆ. ಇತ್ತ ಅನಿರ್ದಿಷ್ಟಾವಧಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಅನ್ನು ಮುಂದೂಡಲಾಗಿದೆ.
ಜುಲೈನಿಂದ ಅಂತಾರಾಷ್ಟ್ರೀಯ ಪ್ರವಾಸಗಳು ಪುನರಾರಂಭಗೊಳ್ಳಲಿವೆ. ಈ ವರ್ಷದ ಕೊನೆಯಲ್ಲಿ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನಕ್ಕೆ ಆತಿಥ್ಯ ವಹಿಸಲು ಸಿದ್ಧವಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೇಳಿದೆ.