ಉಡುಪಿ: ಬಂಗಾಳ ಕೊಲ್ಲಿಯಲ್ಲಿ ಎದ್ದ ಚಂಡಮಾರುತ ಪಶ್ಚಿಮ ಕರಾವಳಿ ತೀರದಲ್ಲಿ ಐದು ದಿನಗಳ ಕಾಲ ಮಳೆ ಸುರಿಸಿತ್ತು. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಸಂಪೂರ್ಣ ಇಳಿಕೆಯಾಗಿದ್ದು, ಸದ್ಯ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದೆ. ನಾಡದೋಣಿ, ಆಳಸಮುದ್ರ ಮೀನುಗಾರರಿಗೆ ಎಚ್ಚರಿಕೆಯಿಂದ ಇರಬೇಕು ಎಂದು ಉಡುಪಿ ಜಿಲ್ಲಾಡಳಿತ ಸೂಚನೆ ಹೊರಡಿಸಿದೆ.
ಉಡುಪಿ ಜಿಲ್ಲೆಗೆ ಬರುವ ಪ್ರವಾಸಿಗರಿಗೂ ಜಿಲ್ಲಾಡಳಿತ ಸೂಚನೆ ನೀಡಿದ್ದು, ಸಮುದ್ರ ಪ್ರಕ್ಷುಬ್ಧ ಇರುವಾಗ ಯಾರೂ ನೀರಿಗೆ ಇಳಿಯಬಾರದು. ಈಜಾಡಬಾರದು ಎಂದು ಸೂಚಿಸಿದೆ. ನಿನ್ನೆ ಬೆಂಗಳೂನಿಂದ ಬಂದಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಎಲ್ಲಾ ಬೀಚ್ ಗಳಲ್ಲಿ ಮುಳುಗು ತಜ್ಞರು, ಬೀಚ್ ಅಭಿವೃದ್ಧಿ ಸಮಿತಿಯವರು ಪ್ರವಾಸಿಗರನ್ನು ಕಡಲಿಗಿಳಿಯದಂತೆ ತಡೆದರೂ ಸೂಚನೆಗಳನ್ನು ಉಲ್ಲಂಘಿಸಿ ಪ್ರವಾಸಿಗರು ಸಮುದ್ರಕ್ಕಿಳಿಯುತ್ತಿದ್ದಾರೆ.
ಮಲ್ಪೆ, ಕಾಪು, ಪಡುಬಿದ್ರೆ, ಮರವಂತೆ ಬೀಚ್ ನಲ್ಲಿ ಪ್ರವಾಸಿಗರು ಬಹಳ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಸ್ಥಳೀಯ ಮೀನುಗಾರ ಪುರಂದರ ಮಾತನಾಡಿ, ಸಮುದ್ರ ಶಾಂತವಾದಾಗ ಪ್ರವಾಸಿಗರು ನೀರಿಗೆ ಇಳಿಯಬೇಕು. ರಫ್ ಇರುವಾಗ ಇಳಿಯಬಾರದು. ಮೇಲಿಂದ ನಿಂತು ಸಮುದ್ರ ನೋಡಬಹುದು. ಕೆಲ ಪ್ರವಾಸಿಗರು ಸ್ಥಳೀಯ ಈಜು ತಜ್ಞರು ಹೇಳಿದ ಮಾತು ಕೇಳುವುದಿಲ್ಲ. ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.