ಬೆಂಗಳೂರು: ಸಿಎಂ ಬೊಮ್ಮಾಯಿ ಸಂಪುಟ ಅಸ್ತಿತ್ವಕ್ಕೆ ಬಂದು ನಾಲ್ಕು ದಿನವಾದ್ರೂ, ನೂತನ ಮಂತ್ರಿಗಳಿಗೆ ಖಾತೆ ಹಂಚಿಕೆ ಆಗಿಲ್ಲ. ಮುಖ್ಯಮಂತ್ರಿಗಳು ಖಾತೆ ಹಂಚಿಕೆ ಪಟ್ಟಿಯನ್ನು ರಾಜಭವನಕ್ಕೆ ಶುಕ್ರವಾರ ಸಂಜೆಯೆ ಕಳಿಸಿಕೊಟ್ಟಿದ್ರೂ, ಅದಕ್ಕೆ ಇನ್ನೂ ಪ್ರಕಟವಾಗುವ ಭಾಗ್ಯ ಸಿಕ್ಕಿಲ್ಲ. ಬೊಮ್ಮಾಯಿ ಪಟ್ಟಿಗೆ ಹೈಕಮಾಂಡ್ ಬ್ರೇಕ್ ಹಾಕಿದ್ಯಾ ಅನ್ನೋ ಅನುಮಾನ ಮೂಡಿದೆ.
ಪವರ್ ಫುಲ್ ಖಾತೆಗಳಾದ ಜಲಸಂಪನ್ಮೂಲ, ಇಂಧನ, ಬೃಹತ್ ಕೈಗಾರಿಕಾ ಖಾತೆಗಳಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಏರ್ಪಟ್ಟಿದ್ರಿಂದ ತಡೆ ಹಿಡಿಯಲಾಗಿದೆಯಾ ಎಂಬ ಚರ್ಚೆ ನಡೆದಿದೆ. ಗೃಹ ಖಾತೆಗಾಗಿ ಬಿ.ಸಿ.ಪಾಟೀಲ್ ಪ್ರಯತ್ನಿಸ್ತಿದ್ದಾರೆ. ಎಸ್‍ಟಿ ಸೋಮಶೇಖರ್ ಅವರಂತೂ ನನಗೆ ಬೆಂಗಳೂರು ನಗರ ಅಭಿವೃದ್ಧಿ ಖಾತೆ ಬೇಕು ಎಂದು ಬಹಿರಂಗವಾಗಿ ಬೇಡಿಕೆ ಇಟ್ಟಿದ್ದಾರೆ. ಸುಧಾಕರ್ ಮತ್ತೆ ಆರೋಗ್ಯ ಖಾತೆ ಪಡೆಯಲು ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
Advertisement
Advertisement
ಸದ್ಯ ಪಬ್ಲಿಕ್ ಟಿವಿಗೆ ಲಭ್ಯ ಆಗಿರುವ ಮಾಹಿತಿ ಪ್ರಕಾರ, ಕೆಲವರಿಗೆ ಪ್ರಮುಖ ಖಾತೆಗಳು ಲಭ್ಯ ಆಗಿವೆ ಎನ್ನಲಾಗಿವೆ. ಆ ಸಂಭಾವ್ಯ ಪಟ್ಟಿ ಇಲ್ಲಿದೆ.
* ಗೋವಿಂದ ಕಾರಜೋಳ – ಜಲಸಂಪನ್ಮೂಲ
* ಆರ್ ಅಶೋಕ್ – ಗೃಹ ಮತ್ತು ಕಂದಾಯ
* ಉಮೇಶ್ ಕತ್ತಿ – ಲೋಕೋಪಯೋಗಿ
* ಶ್ರೀರಾಮುಲು – ಸಮಾಜ ಕಲ್ಯಾಣ
* ಬಿ.ಸಿ.ನಾಗೇಶ್ – ಶಿಕ್ಷಣ
* ಸುನಿಲ್‍ಕುಮಾರ್- ಹಿಂದುಳಿದ ವರ್ಗಗಳ ಇಲಾಖೆ
* ಮಾಧುಸ್ವಾಮಿ – ಕಾನೂನು, ಸಂಸದೀಯ ವ್ಯವಹಾರ
* ಅರಗ ಜ್ಞಾನೇಂದ್ರ – ಅರಣ್ಯ
Advertisement
Advertisement
ರೆಬೆಲ್ ಮೀಟಿಂಗ್:
ಇನ್ನು ಸಂಪುಟ ರಚನೆಯಿಂದ ಉಂಟಾಗಿರುವ ಅತೃಪ್ತಿ ಶಮನವಾಗಿಲ್ಲ. ರಹಸ್ಯವಾಗಿ ಭಿನ್ನಮತೀಯ ಚಟುವಟಕೆಗಳು ಶುರುವಾದಂತಿವೆ. 17 ವರ್ಷಗಳ ಬಳಿಕ ಜಾರಕಿಹೊಳಿ ಕುಟುಂಬ ಸದಸ್ಯರು ಇಲ್ಲದ ಸಂಪುಟ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಈ ಬೆಳವಣಿಗೆಯಿಂದ ತೀವ್ರವಾಗಿ ಅಸಮಾಧಾನಗೊಂಡಿರುವ ರಮೇಶ್ ಜಾರಕಿಹೊಳಿ, ತಮ್ಮ ಬೆಂಬಲಿಗ ಶಾಸಕರೊಂದಿಗೆ ಕಳೆದ ರಾತ್ರಿ ಸಭೆ ನಡೆಸಿದ್ದಾರೆ.
ತಾವು ಬಿಜೆಪಿಗೆ ಕರೆತಂದ ಶ್ರೀಮಂತ ಪಾಟೀಲ್, ಮಹೇಶ್ ಕುಮಟಳ್ಳಿಗೆ ಮಂತ್ರಿ ಸ್ಥಾನ ನೀಡದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಯೋಗೇಶ್ವರ್‍ಗೆ ಮಂತ್ರಿ ಸ್ಥಾನ ಕೈತಪ್ಪಿರುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಸಚಿವ ಸ್ಥಾನ ಸಿಗದೇ ಇರೋದಕ್ಕೆ ನೊಂದಿರುವ ಶ್ರೀಮಂತ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ. ಶೀಘ್ರವೇ ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕ್ಷತ್ರಿಯ ಮರಾಠ ಒಕ್ಕೂಟ ಎಚ್ಚರಿಸಿದೆ. ಇದನ್ನೂ ಓದಿ: 3ನೇ ಬಾರಿಯೂ ಕೈತಪ್ಪಿದ ಸಚಿವ ಸ್ಥಾನ – ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಕುಮಾರಸ್ವಾಮಿ
ಈ ಮಧ್ಯೆ, ಸಚಿವ ಸ್ಥಾನ ತಪ್ಪಿದವರಿಗೆ ವೈರಾಗ್ಯ ಕಾಡುವುದು ಸಹಜ. ಆದ್ರೆ ತಾಳಿದವನು ಬಾಳಿಯಾನು ಎಂಬ ಮಾತನ್ನು ನೆನಪಲ್ಲಿ ಇಟ್ಕೋಬೇಕು ಎಂದು ಸಚಿವ ಮುರುಗೇಶ್ ನಿರಾಣಿ ಹಿತವಚನ ಬೋಧಿಸಿದ್ದಾರೆ. ಸಿಎಂ ವಿರುದ್ಧ ಸಿಡಿದಿದ್ದ ನೆಹರೂ ಓಲೇಕಾರ್ ಕೋಪ ಈಗ ಶಮನವಾಗಿದೆ. ಪೂರ್ಣಿಮಾ ಶ್ರೀನಿವಾಸ್‍ಗೆ ಮಂತ್ರಿ ಸ್ಥಾನ ತಪ್ಪಿದನ್ನು ವಿರೋಧಿಸಿ ಅವರ ಬೆಂಬಲಿಗರು ಧರ್ಮಪುರದಿಂದ ಹಿರಿಯೂರಿನವರೆಗೂ ಪಾದಯಾತ್ರೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ರೇಣುಕಾಚಾರ್ಯ ಮೂರು ದಿನದಿಂದ ಕ್ಷೇತ್ರದ ಕಡೆ ತಲೆ ಹಾಕಿಲ್ಲ. ಆದ್ರೆ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಯಾವುದೇ ಭಿನ್ನಮತೀಯ ಚಟುವಟಿಕೆ ನಡೆದಿಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ಮಂತ್ರಿಸ್ಥಾನ ನೀಡದಿದ್ರೆ ಮತ್ತೊಂದು ಆಪರೇಷನ್ ನಡೆಸುವ ಎಚ್ಚರಿಕೆ ನೀಡಿದರಂತೆ ಎಂಟಿಬಿ ನಾಗರಾಜ್!