ಬೆಂಗಳೂರು: ಪರೋಕ್ಷವಾಗಿ ಕೋವಿಡ್ ರೋಗಿ ಸಾವಿಗೆ ಕಾರಣವಾದ ಭಾರತಿ ಆಸ್ಪತ್ರೆಯ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ನಾಗರಬಾವಿಯಲ್ಲಿರುವ ಭಾರತಿ ಆಸ್ಪತ್ರೆಗೆ 64 ವರ್ಷ ಮಹಿಳೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಅವರಿಗೆ ರೆಮಿಡಿಸಿವಿರ್ ಇಂಜೆಕ್ಷನ್ ಅವಶ್ಯಕತೆ ಇರುತ್ತದೆ. ಆದರೆ ಆಸ್ಪತ್ರೆಯಲ್ಲಿ ರೆಮಿಡಿಸಿವಿರ್ ಇಂಜೆಕ್ಷನ್ ಗೆ 15 ಸಾವಿರ ಹಣವನ್ನು ಬೇಡಿಕೆ ಇಟ್ಟಿದ್ದಾರೆ.
ಈ ವಿಚಾರವನ್ನು ಮಹಿಳೆ ಸಂಬಂಧಿಕರು ಬಿಬಿಎಂಪಿ ಡ್ರಗ್ ಕಂಟ್ರೋಲರ್ ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಕೂಡಲೇ ಡ್ರಗ್ ಕಂಟ್ರೋಲರ್ ಬಂದು ಇಂಜೆಕ್ಷನ್ ಕೊಟ್ಟಿದ್ದಾರೆ. ಡ್ರಗ್ ಕಂಟ್ರೋಲರ್ ಬಂದು ಔಷಧಿ ನೀಡಿದ್ದಕ್ಕೆ ಅಸಮಾಧಾನಗೊಂಡ ಆಸ್ಪತ್ರೆಯವರು ರೋಗಿಯನ್ನು ಡಿಸ್ಚಾರ್ಜ್ ಮಾಡಿದ್ದಾರೆ.
ರೋಗಿಗೆ ಬೇರೆ ಕಡೆ ಆಸ್ಪತ್ರೆಯಲ್ಲಿ ಕೂಡಲೇ ಬೆಡ್ ವ್ಯವಸ್ಥೆ ಸಿಗದ ಕಾರಣ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಬಿಬಿಎಂಪಿ ವೈದ್ಯರೊಬ್ಬರು ಭಾರತಿ ಆಸ್ಪತ್ರೆ ವಿರುದ್ಧ ದೂರು ಕೊಟ್ಟಿದ್ದಾರೆ.
ಇಂಜೆಕ್ಷನ್ ಗೆ ದುಪ್ಪಟ್ಟು ಹಣದ ಬೇಡಿಕೆ ಮತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದರಿಂದ ರೋಗಿ ಸಾವನ್ನಪ್ಪಿದ್ದಾರೆ. ಹಾಗಾಗಿ ರೋಗಿ ಸಾವಿಗೆ ಆಸ್ಪತ್ರೆಯೇ ಪರೋಕ್ಷವಾಗಿ ಹೊಣೆಯಾಗಿದೆ ಎಂದು ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ವಿಜಯ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.