ಬೆಂಗಳೂರು: ಪರೀಕ್ಷೆ ನಡೆಸದೇ ಕೊರೊನಾ ಪಾಸಿಟಿವ್ ಫಲಿತಾಂಶ ಬಂದಿರುವ ಬಗ್ಗೆ ಬಿಬಿಎಂಪಿ ಸ್ಪಷ್ಟನೆ ನೀಡಿದೆ.
ಅಕ್ಟೋಬರ್ 1 ರಂದು ಪಬ್ಲಿಕ್ ಟಿವಿ ಪರೀಕ್ಷೆ ನಡೆಸದೇ ಮೂವರು ಮಹಿಳೆಯರಿಗೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ವರದಿ ಮಾಡಿತ್ತು.
Advertisement
ಈ ವರದಿಗೆ ಇಂದು ಸ್ಪಷ್ಟನೆ ನೀಡಿದ ಬಿಬಿಎಂಪಿ, ಆರೋಪಿತರ ಗಂಟಲ ದ್ರವದ ಮಾದರಿ ನಮ್ಮ ಬಳಿಯಿದೆ. ಆರೋಪಿತರೇ ಮೊಬೈಲ್ ನಂಬರ್ ಮತ್ತು ಒಟಿಪಿ ಕೊಟ್ಟಿದ್ದಾರೆ. ಬಿಬಿಎಂಪಿಯ ಯಾವುದೇ ಸಿಬ್ಬಂದಿ ಈ ರೀತಿಯ ಕೃತ್ಯ ಮಾಡಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡಿದೆ.
Advertisement
Advertisement
ಪ್ರತಿ ದಿನ ಬನಶಂಕರಿ ಮೆಟ್ರೋ ನಿಲ್ದಾಣದ ಬಳಿ ಹತ್ತಿರ 70 ರಿಂದ 80 ಜನರ ಗಂಟಲು ದ್ರವ ಮಾದರಿಯನ್ನು ತೆಗೆದುಕೊಳ್ಳಲಾಗುತ್ತದೆ. ಸೆಪ್ಟೆಂಬರ್ 24 ರಂದು 65 ಮಂದಿಯ ಗಂಟಲು ದ್ರವವನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲಿ ಮೂವರ ಗಂಟಲು ದ್ರವದ ಮಾದರಿ ಕೂಡ ಸೇರಿದೆ. ಇದರಲ್ಲಿ ಯಾರಾದರೂ ತಪ್ಪಿತಸ್ಥರಿದ್ದರೆ ಕೂಲಂಕಷವಾಗಿ ತನಿಖೆ ಮಾಡಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದೆ.
Advertisement
ಆರೋಪ ಏನು?
ಮೂವರು ಮಹಿಳೆಯರು ಬನಶಂಕರಿ ಮೆಟ್ರೋ ನಿಲ್ದಾಣದಿಂದ ಬೇರೊಂದು ಸ್ಥಳಕ್ಕೆ ಹೋಗುತ್ತಿದ್ದರು. ಬನಶಂಕರಿ ಮೆಟ್ರೋ ನಿಲ್ದಾಣದ ಕೆಳಗಡೆ ಉಚಿತ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಈ ವೇಳೆ ಅಲ್ಲಿದ್ದ ವೈದ್ಯರು ಮೂವರು ಮಹಿಳೆಯರ ನಂಬರ್ ಪಡೆದು, ಒಟಿಪಿ ನಂಬರ್ ಅನ್ನು ಪಡೆದಿದ್ದಾರೆ. ಆದರೆ ಈ ಮೂವರು ಗಂಟಲು ದ್ರವ ಪರೀಕ್ಷೆಯನ್ನ ಮಾಡಿಸಿಯೇ ಇರಲಿಲ್ಲ. ಹೀಗಿದ್ದರೂ ಈ ಮೂವರು ಮಹಿಳೆಯರಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ಬಿಬಿಎಂಪಿ ಹಾಗೂ ಪೊಲೀಸ್ ಠಾಣೆಯಿಂದ ಸೆ.26ರಂದು ಕರೆ ಬಂದಿದೆ.
ಈ ಬಗ್ಗೆ ನಂಬರ್ ಕೊಟ್ಟ ಸ್ಥಳಕ್ಕೆ ಬಂದು ವಿಚಾರಿಸಿದರೆ ಈ ಬಗ್ಗೆ ಗೊತ್ತೇ ಇಲ್ಲ. ಏನೋ ಮಿಸ್ಸಾಗಿರಬಹುದು, ಕಾಂಪ್ರಮೈಸ್ ಆಗಿ. ಇನ್ನೊಮ್ಮೆ ಟೆಸ್ಟ್ ಮಾಡುತ್ತೇವೆ ಬನ್ನಿ ಎಂದು ವಾರ್ಡ್ ನಂಬರ್ 180 ಯಾರಬ್ ನಗರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ವೈದ್ಯಾಧಿಕಾರಿಗಳು ಮನವೊಲಿಸಲು ಮುಂದಾಗಿದ್ದಾರೆ. ಮುಖ್ಯವಾಗಿ ಗಂಟಲ ಮಾದರಿ ತೆಗೆದುಕೊಳ್ಳದೇ ಹೇಗೆ ವರದಿ ಹೇಗೆ ನೀಡಲಾಗಿದೆ ಎಂಬುದು ಫೋನ್ ನಂಬರ್ ನೀಡಿದವರ ಪ್ರಶ್ನೆ.
ಸದ್ಯ ನಕಲಿ ರಿಸಲ್ಟ್ ಕೊಟ್ಟವರ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್, ಬಿಬಿಎಂಪಿ ಕಮಿಷನರ್ ಹಾಗೂ ಆರೋಗ್ಯಾಧಿಕಾರಿಗೆ ದೂರು ನೀಡಲಾಗಿದೆ.
ಮಹಿಳೆಯರು ಪಬ್ಲಿಕ್ ಟಿವಿಗೆ ಹೇಳಿದ್ದು ಏನು? ಈ ಕೆಳಗಿನ ವಿಡಿಯೋ ನೋಡಿ