ಕಾರವಾರ: ದೀಪಾವಳಿ ಬಂದ್ರೆ ಸಾಕು ಎಲ್ಲೆಲ್ಲೂ ಹಣತೆಗಳ ದರ್ಬಾರ್. ಆದರೆ ಬಹುತೇಕರು ಪರಿಸರಕ್ಕೆ ಪೂರಕವಲ್ಲದ ಪ್ಲಾಸ್ಟಿಕ್, ಮೇಣದ ಬತ್ತಿಗಳನ್ನು ಉಪಯೋಗಿಸುತ್ತಾರೆ. ಇದರಿಂದಾಗಿ ತ್ಯಾಜ್ಯಗಳು ಹೇರಳವಾಗಿ ಉತ್ಪತ್ತಿಯಾಗುವ ಜೊತೆಗೆ ಪರಿಸರವನ್ನು ಸಹ ಕಲ್ಮಶಗೊಳಿಸುತ್ತದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಕರಗಿನಕೊಪ್ಪ ಗ್ರಾಮದ ಗಣೇಶ್ ಲಮಾಣಿ ಎಂಬವರು ಪರಿಸರ ಪೂರಕವಾದ ಗೋಮಯದ ಹಣತೆ ಹಾಗೂ ಹೂ ಕುಂಡವನ್ನು ನಿರ್ಮಿಸಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.
Advertisement
ಅಳವಿನಂಚಿನಲ್ಲಿರುವ ಮಲೆನಾಡು ಗಿಡ್ಡ ತಳಿಯ ಬಿಡಾಡಿ ಹಸುಗಳನ್ನು ಕರೆತಂದು ಗೋ ಸೇವಾ ಕೇಂದ್ರ ಪ್ರಾರಂಭಿಸಿರುವ ಇವರು ಮನೆಯಲ್ಲಿ ಮಲೆನಾಡು ಗಿಡ್ಡ ತಳಿಯ ಹಸುಗಳಿಗೆ ಆಶ್ರಯದಾತರಾಗಿದ್ದಾರೆ. ಗೋವುಗಳು ಕೇವಲ ಹಾಲು ಉತ್ಪನ್ನಕ್ಕೆ ಸೀಮಿತಗೊಳಿಸದೇ ಇತರ ಉತ್ಪನ್ನಗಳನ್ನೂ ಸಹ ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
Advertisement
Advertisement
ಗೋಮಯದ ಹಣತೆ ಹಾಗೂ ಹೂ ಕುಂಡ ಹೇಗಿರುತ್ತೆ!, ಉಪಯೋಗವೇನು?:
ಯಾವುದೇ ರಾಸಾಯನಿಕ ಬಳಸದೇ ಗೋವುಗಳ ಸಗಣಿಯನ್ನು ಹಾಗೂ ಗೋಮೂತ್ರವನ್ನು ಅಂಟಿನೊಂದಿಗೆ ಸೇರಿಸಿ ಅಚ್ಚುಗಳಲ್ಲಿ ಒತ್ತಿ ಹಣತೆ ತಯಾರಿಸಲಾಗುತ್ತದೆ. ಹಾಗೆಯೇ ಹೂ ಕುಂಡವನ್ನು ಸಹ. ಇನ್ನು ಇದರ ಜೊತೆಗೆ ಗೋಮೂತ್ರ, ಸಗಣಿ ಹಾಗೂ ದೂಪ ಸೇರಿಸಿ ಊದುಬತ್ತಿ ಸಹ ತಯಾರಿಸಲಾಗುತ್ತಿದ್ದು, ಎಲ್ಲವೂ ಪರಿಸರಕ್ಕೆ ಪೂರಕವಾಗಿದೆ ಎಂದು ಗನೇಶ್ ಹೇಳಿದ್ದಾರೆ.
Advertisement
ಈ ಹಣತೆಯಲ್ಲಿ ಎಣ್ಣೆಯನ್ನು ಸೇರಿಸಿ ದೀಪ ಬೆಳಗುವುದರಿಂದ ದೀಪ ಬೆಳಗಿದ ನಂತರ ಹಣತೆ ಸಹ ಉರಿದು ಭಸ್ಮವಾಗುತ್ತದೆ. ಈ ಬಸ್ಮವನ್ನು ದೇಹದಲ್ಲಿ ಆಗುವ ಪಿತ್ತದ ಉರಿಗೆ ಹಾಗೂ ಗುಳ್ಳೆಗಳಿಗೆ ಔಷಧವಾಗಿದ್ದು ಹಣತೆ ವಾತಾವರಣ ಶುದ್ಧಿ ಮಾಡುವ ಗುಣ ಹೊಂದಿದೆ. ಇನ್ನು ಸಗಣಿಯಿಂದ ನಿರ್ಮಿಸಿದ ಹೂ ಕುಂಡ ಕ್ರಮೇಣ ಕರಗಿ ಗಿಡಕ್ಕೆ ಗೊಬ್ಬರವಾಗುವ ಜೊತೆ ಶೂನ್ಯ ತ್ಯಾಜ್ಯವಾಗಿದೆ. ಸಗಣಿ ಮಿಶ್ರಿತ ದೂಪದ ಕಡ್ಡಿಯ ಭಸ್ಮವು ಗಾಯಗಳು ವಾಸಿಯಾಗಲು ಉಪಯೋಗಿಸಬಹುದಾಗಿದೆ.
ಸ್ವಾವಲಂಬಿ ಬದುಕಿಗೊಂದು ಉದ್ಯೋಗ:
ಸದ್ಯ ಕೊರೊನಾ ದಂತ ಮಹಾ ಮಾರಿಯಿಂದಾಗಿ ಜನ ಉದ್ಯೋಗ ಕಳೆದುಕೊಳ್ಳುತಿದ್ದಾರೆ. ರೈತರು ಲಾಭವಿಲ್ಲ ಎಂದು ಹಸುಗಳನ್ನು ಸಾಕಲು ಮನಸ್ಸು ಮಾಡುತ್ತಿಲ್ಲ. ಇನ್ನು ಹಸು ಸಾಗಾಣಿಕೆ ಕಮರ್ಷಿಯಲ್ ಟಚ್ ಪಡೆದಿದ್ದು ಜರ್ಸಿ ಆಕಳುಗಳ ಬೇಡಿಕೆ ಹೆಚ್ಚಾಗಿ ಸ್ಥಳೀಯ ಸ್ವದೇಶಿ ಹಸುಗಳ ಸಾಗಾಣಿಕೆ ಇಳಿಮುಖದ ಜೊತೆಗೆ ತಳಿಗಳು ಸಹ ಕ್ಷೀಣಿಸಿವೆ. ಆದರೆ ಮೊದಲು ಮಲೆನಾಡು ಗಿಡ್ಡದಂತಹ ಕ್ಷೀಣಿಸುತ್ತಿರುವ ತಳಿಯನ್ನು ಅಭಿವೃದ್ಧಿಗೊಳಿಸುವ ದೃಷ್ಟಿಯಿಂದ ಪ್ರಾರಂಭವಾದ ಹಸು ಸಾಗಾಣಿಕೆ ಈಗ ಗಣೇಶ್ ಲಾವಣಿ ಅವರ ಬದುಕು ಕಟ್ಟಿಕೊಟ್ಟಿದೆ.
ಪ್ರತಿ ದಿನ 350 ರಿಂದ 400ಕ್ಕೂ ಹೆಚ್ಚು ಗೋಮಯದ ಹಣತೆ, ಹೂ ಕುಂಡ ತಯಾರಿಸುತ್ತಿದ್ದಾರೆ. ಶಿರಸಿ, ಶಿವಮೊಗ್ಗ, ಮುಂಬೈ,ಪುಣೆ, ಮಹಾರಾಷ್ಟ್ರ, ಗೋಕರ್ಣ ಸೇರಿದಂತೆ ಹಲವು ಜಿಲ್ಲೆ, ಹೊರರಾಜ್ಯಗಳಿಂದ ಈಗ ಅವರಿಗೆ ಬೇಡಿಕೆ ಬರುತ್ತಿದ್ದು ಉತ್ತಮ ಲಾಭ ತರುತ್ತಿದೆ. ಇದರ ಜೊತೆಗೆ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಸಹ ನಡೆಯುತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.