ಬೆಂಗಳೂರು: ಕೊರೊನಾ ಲಾಕ್‍ಡೌನ್ ಉಲ್ಲಂಘಿಸಿ ಮೆರವಣಿಗೆ ನಡೆಸಿ ಬಂಧನವಾಗಿದ್ದ ಪಾದರಾಯನಪುರದ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಕೋವಿಡ್-19 ಹಿನ್ನೆಲೆ ಸರ್ಕಾರ ವಿಧಿಸಿದ್ದ ನಿಮಯ ಉಲ್ಲಂಘಿಸಿದ ಪ್ರಕರಣವನ್ನು 3ನೇ ಎಸಿಎಂಎಂ ಕೋರ್ಟ್ ವಿಚಾರಣೆ ನಡೆಸಿತ್ತು. ಈ ವೇಳೆ ವಾದ, ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು, ಇಮ್ರಾನ್ ಪಾಷಾ ಸೇರಿದಂತೆ 24 ಜನ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
Advertisement
Advertisement
ಕೋರ್ಟ್ ಆದೇಶದ ಬಳಿಕ ಪೊಲೀಸರು ಇಮ್ರಾನ್ ಪಾಷಾ ಸೇರಿದಂತೆ 24 ಜನ ಆರೋಪಿಗಳನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 28 ಆರೋಪಿಗಳನ್ನ ಬಂಧಿಸಲಾಗಿತ್ತು. ಆದರೆ ಒಬ್ಬನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಉಳಿದ ಮೂವರ ರಿಪೋರ್ಟ್ ಬರಬೇಕಿದೆ. ಹೀಗಾಗಿ 24 ಆರೋಪಿಗಳನ್ನ ಮಾತ್ರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
Advertisement
ಆರೋಪಿಗಳನ್ನು ಅರೆಸ್ಟ್ ಮಾಡಿ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಇಂದು ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರು ವಿಚಾರಣೆ ನಡೆಸಿದರು. ಬಳಿಕ ಇಮ್ರಾನ್ ಪಾಷಾ ಮತ್ತು ಬಂಟರ ಕೊರೊನಾ ರಿಪೋರ್ಟ್ ನೆಗೆಟಿವ್ ಬಂದಿದ್ದರಿಂದ ಕೋರ್ಟ್ ಆದೇಶದಂತೆ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.
Advertisement
ಏನಿದು ಪ್ರಕರಣ?:
ಕೋವಿಡ್-19 ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಇಮ್ರಾನ್ ಪಾಷಾ ಜೂನ್ 7ರಂದು ಮಧ್ಯಾಹ್ನ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಬಿಡುಗಡೆಯಾದ ಪಾಷಾರನ್ನು ಕಾರ್ಯಕರ್ತರು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಪಾದರಾಯನಪುರದಲ್ಲಿರುವ ನಿವಾಸಕ್ಕೆ ಕರೆ ತಂದಿದ್ದರು.
ಈ ವೇಳೆ ಬೈಕ್‍ಗಳಲ್ಲಿ ಕುಳಿತವರು ಹಲ್ಮೆಟ್ ಇಲ್ಲದೇ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು ಎಂದಿದ್ದರೂ ಗುಂಪಾಗಿ ಮೆರವಣಿಗೆ ಮಾಡಿ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ರಾಜಕೀಯ ಮೆರವಣಿಗೆ ನಡೆಸಬಾರದು ಎಂದು ಸೂಚಿಸಿದ್ದರೂ ಭಾರೀ ಸಂಖ್ಯೆಯಲ್ಲಿ ಮೆರವಣಿಗೆ ನಡೆಸಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ ಪೊಲೀಸರು ಇಮ್ರಾನ್ ಪಾಷಾರನ್ನು ಬಂಧಿಸಿದ್ದರು.
ಹಾಟ್ ಸ್ಪಾಟ್ ಆಗಿದ್ದ ಪ್ರದೇಶದಲ್ಲಿ ಮೆರವಣಿಗೆ ನಡೆಸುತ್ತಿದ್ದರೂ ಪೊಲೀಸರು ಯಾವುದೇ ಕ್ರಮಕೈಗೊಳ್ಳದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ತೆರೆದ ಕಾರಿನಲ್ಲಿ ಹೂ ಮಳೆಯೊಂದಿಗೆ ಕ್ಷೇತ್ರಕ್ಕೆ ಬರುತ್ತಿದ್ದ ಇಮ್ರಾನ್ ಪಾಷಾರನ್ನು ನಡೆಸಿಕೊಂಡೇ ಠಾಣೆಗೆ ಕರೆಸಿಕೊಂಡು ಹೋಗಿ ಬಂಧಿಸಿದ್ದರು. ಈ ವೇಳೆ ಲಘು ಲಾಠಿ ಚಾರ್ಜ್ ಮಾಡಿ ಪೊಲೀಸರು ಗುಂಪನ್ನು ಚದುರಿಸಿದ್ದರು.