ಬಾಗಲಕೋಟೆ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ನಿಸ್ವಾರ್ಥ ಸೇವೆಗೈದು ಪಬ್ಲಿಕ್ ಹೀರೋ ಆಗಿದ್ದ ಹಿರಿಯ ವೈದ್ಯ ಅಶೋಕ್ ಸೊನ್ನದ ಕೊರೊನಾಗೆ ಬಲಿಯಾಗಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬಂಟನೂರು ಗ್ರಾಮದವರಾದ ಡಾ.ಅಶೋಕ್ ಸೊನ್ನದ್ ತಮ್ಮ ನಿಸ್ಚಾರ್ಥ ಸೇವೆಯಿಂದಲೇ ಗುರುತಿಸಿಕೊಂಡವರು. ಸಕ್ಕರೆ ಕಾಯಿಲೆ ಹಾಗೂ ಕ್ಲಿಷ್ಟ ಹುಣ್ಣು ರೋಗಕ್ಕೆ ಉಚಿತ ಚಿಕಿತ್ಸೆ ನೀಡಿ ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದರು. ತಮ್ಮ ಇಳಿ ವಯಸ್ಸಿನಲ್ಲಿ ಅಮೆರಿಕಾದಲ್ಲೇ ನೆಲೆಸಿರುವ ತಮ್ಮ ಕಟುಂಬದೊಂದಿಗೆ ಇರೋದನ್ನ ಬಿಟ್ಟು ತಾಯ್ನಾಡಿಗೆ ಬಂದು ಜನರ ಸೇವೆಯಲ್ಲಿ ತೊಡಗಿಕೊಂಡಿದ್ದರು.
ಡಾ. ಅಶೋಕ್ ಸೊನ್ನದ್ ತಮ್ಮ ತಾಯಿಯವರಾದ ಪಾರ್ವತಿಬಾಯಿ ಹೆಸರಲ್ಲಿ ಆಸ್ಪತ್ರೆ ತೆರೆದು, ಬಡರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದರು. ಇಡೀ ಕುಟುಂಬವನ್ನ ಅಮೆರಿಕಾದಲ್ಲೇ ಬಿಟ್ಟು ಬಂದು, ಇಲ್ಲಿಯ ಜನರಿಗೆ ಆರೋಗ್ಯ ಸೇವೆ ಮಾಡುವಲ್ಲಿ ಖುಷಿ ಕಂಡಿದ್ರು. ಕಳೆದ ಒಂದು ವಾರದ ಹಿಂದೆ ಡಾ.ಸೊನ್ನದ್ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡು, ಬೆಳಾಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಸೊನ್ನದ್ ಅವರು ಪತ್ನಿ, ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ. ಅಲ್ಲದೇ ಡಾ ಅಶೋಕ್ ಸೊನ್ನದ ಅವರ ಮನೆಯಲ್ಲಿ 7 ಜನ ಗೌರವ ಡಾಕ್ಟರೇಟ್ ಪಡೆದದ್ದು, ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಅಲ್ಲದೇ ನಿಸ್ವಾರ್ಥ ಆರೋಗ್ಯ ಸೇವೆ ಸಲ್ಲಿಸುತ್ತಿದ್ದ ಡಾ ಅಶೋಕ್ ಸೊನ್ನದವರನ್ನ 2014 ರಲ್ಲಿ ಪಬ್ಲಿಕ್ ಹೀರೋ ಎಂದು ಗುರುತಿಸಿತ್ತು. ನಂತ್ರ 2020ರಲ್ಲಿ ಇವರ ನಿಸ್ವಾರ್ಥ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಡಾ ಅಶೋಕ್ ಸೊನ್ನದ್ ಅವರ ನಿಸ್ವಾರ್ಥ ಸೇವೆ ಇಂದಿನ ಪೀಳಿಗೆಯ ವೈದ್ಯಲೋಕ್ಕೆ ಮಾದರಿಯಾಗಿದೆ.