ಬೆಂಗಳೂರು: ಪಬ್ಲಿಕ್ ಟಿವಿಯ ನಿರಂತರ ವರದಿಯ ಬೆನ್ನಲ್ಲೇ ವಿವಾದಾತ್ಮಕ ಯೋಜನೆಯನ್ನು ಕೈ ಬಿಡಲು ಸರ್ಕಾರ ನಿರ್ಧರಿಸಿದ್ದು, ವಿದ್ಯಾಗಮ ಯೋಜನೆಯನ್ನು ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ.
ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಅಲ್ಲದೇ ಜಿಲ್ಲಾವಾರು ಅಂಕಿ-ಅಂಶ ಸಂಗ್ರಹಕ್ಕೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಅಂಕಿ-ಅಂಶಗಳ ವಿಶ್ಲೇಷಣೆ ಆಗೋವರೆಗೂ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ವಿದ್ಯಾಗಮ ಸ್ಥಗಿತಕ್ಕೆ ಒತ್ತಾಯ ಹೆಚ್ಚಾದ ಹಿನ್ನೆಲೆಯಲ್ಲಿ ಸಚಿವ ಸುರೇಶ್ ಕುಮಾರ್ ಗೆ ಸಿಎಂ ಯಡಿಯೂರಪ್ಪ ಕರೆ ಮಾಡಿದ್ದರು. ಜನರಿಂದ ಆಕ್ರೋಶ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಸಚಿವರ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ. ನಂತರ ಸಿಎಂ ವಿದ್ಯಾಗಮ ತಾತ್ಕಾಲಿಕ ಸ್ಥಗಿತಕ್ಕೆ ಸೂಚಿಸಿದ್ದರು. ಸಿಎಂ ಸೂಚನೆ ಹಿನ್ನೆಲೆಯಲ್ಲಿ ಯೋಜನೆ ತಾತ್ಕಾಲಿಕ ಸ್ಥಗಿತಕ್ಕೆ ಅಧಿಕಾರಿಗಳಿಗೆ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಜಾರಿಗೆ ತಂದಿರುವ ವಿದ್ಯಾಗಮ ಕಾರ್ಯಕ್ರಮದ ಕುರಿತು ಕೆಲವು ವಲಯಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿರುವುದನ್ನು ಗಮನಿಸಿದ್ದೇನೆ. ವಿದ್ಯಾಗಮ ಸಮಾಜದ ಕೆಳಸ್ಥರದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ಯೋಜಿಸಿರುವ ಕಾರ್ಯಕ್ರಮ. ಆದರೂ ವಿವಿಧ ವಲಯಗಳಿಂದ ಪ್ರಕಟವಾಗುತ್ತಿರುವ ಕಾಳಜಿಗೆ ಮನ್ನಣೆ ಕೊಟ್ಟು ಶಿಕ್ಷಣ ಇಲಾಖೆ ಈ ಕುರಿತು ಅಭಿಪ್ರಾಯ ಸಂಗ್ರಹಿಸಲು ಉದ್ದೇಶಿಸಿದೆ. ಹೀಗಾಗಿ ಜಿಲ್ಲಾವಾರು ಅಂಕಿ ಅಂಶಗಳ ಸ್ವೀಕಾರ ಹಾಗೂ ಅದರ ಸಮರ್ಪಕ ವಿಶ್ಲೇಷಣೆ ಪೂರ್ಣಗೊಳ್ಳುವವರೆಗೂ ವಿದ್ಯಾಗಮ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ.
ಆರೋಪ:
ನೂರಾರು ಶಿಕ್ಷಕರು, 30ಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾಗಮದಿಂದ ಕೊರೊನಾ ಸೋಂಕು ತಾಗಿದೆ ಎಂದು ಆರೋಪ ಮಾಡಲಾಗಿತ್ತು. ಅಲ್ಲದೇ ವಿದ್ಯಾಗಮ ಯೋಜನೆಯಲ್ಲಿದ್ದ 160ಕ್ಕೂ ಹೆಚ್ಚು ಶಿಕ್ಷಕರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವಿದ್ಯಾಗಮದಿಂದ ಸೋಂಕು ಬಂದಿದ್ದು, ಅನೇಕ ಸಂದರ್ಭದಲ್ಲಿ ಸಾವಿಗೀಡಾಗಿರುವ ಶಿಕ್ಷಕರ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ವಿದ್ಯಾಗಮ ಯೋಜನೆಯ ನಂತರ ಶಿಕ್ಷಕರು, ಪೋಷಕರು, ಮಕ್ಕಳಲ್ಲಿ ಕೋವಿಡ್ ಭೀತಿ ಹೆಚ್ಚಾಗುತ್ತಿದೆ ಎಂದು ವಿದ್ಯಾಗಮ ಯೋಜನೆ ರದ್ದಿಗೆ ಶಿಕ್ಷಕರು ಹಾಗೂ ಪೋಷಕರಿಂದ ಒತ್ತಾಯಿಸುತ್ತಿದ್ದರು.
ಏನಿದು ವಿದ್ಯಾಗಮ ಯೋಜನೆ ಏಕೆ?
ಶಾಲೆಗಳು ಪ್ರಾರಂಭವಾಗುವವರೆಗೂ ವಿದ್ಯಾರ್ಥಿಗಳು ವಿದ್ಯೆ ಕಲಿಕೆಯಿಂದ ದೂರವಾಗಬಾರದೆನ್ನುವ ಕಾರಣಕ್ಕೆ ವಿದ್ಯಾಗಮ ಯೋಜನೆ ಜಾರಿ ಮಾಡಲಾಗಿತ್ತು. ಗ್ರಾಮೀಣ ಪ್ರದೇಶದ, ನಗರ ಪ್ರದೇಶದ ಸರ್ಕಾರಿ ಮಕ್ಕಳನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಿತ್ತು. ರಾಜ್ಯ ಸರ್ಕಾರ ಆಗಸ್ಟ್ 4ರಂದು ಅಧಿಕೃತ ಆದೇಶ ಜಾರಿಗೆ ತಂದಿತ್ತು. ಸುಮಾರು 47 ಲಕ್ಷ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದು ಸರ್ಕಾರ ಯೋಜನೆ ಜಾರಿಗೆ ತಂದಿತ್ತು.
ವಿದ್ಯಾಗಮ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗದಂತೆ ಮಕ್ಕಳಿರುವ ಜಾಗಕ್ಕೆ ಹೋಗಿ ಶಿಕ್ಷಕರು ಪಾಠ ಮಾಡಬೇಕು. ಒಂದೇ ಊರಿನ ಒಂದೇ ತರಗತಿಯ ವಿದ್ಯಾರ್ಥಿಗಳ ಗುಂಪು ಮಾಡಬೇಕು. ಗ್ರಾಮದ ದೇವಸ್ಥಾನ, ಸಮುದಾಯ ಭವನ, ಖಾಲಿ ಮನೆ ಹೀಗೆ ಪಾಠ ಮಾಡಲು ಸೂಕ್ತವಾದ ಶುಚಿತ್ವ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು. ಆದರೆ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಮಾಡುವಂತಿರಲಿಲ್ಲ.
ವಿದ್ಯಾರ್ಥಿಗಳ ಬಳಿ ಇರುವ ಮೊಬೈಲ್ ಸೌಲಭ್ಯದ ಆಧಾರದ ಮೇಲೆ ಮೂರು ಗುಂಪುಗಳನ್ನಾಗಿ ಮಾಡಬೇಕಿತ್ತು. ಮೊದಲ ಗುಂಪಿನಲ್ಲಿ ಯಾವುದೇ ಮೊಬೈಲ್ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳ ಸೇರ್ಪಡೆ, ಇವರ ಬಳಿ ಶಿಕ್ಷಕರೇ ಹೋಗಿ ಪಾಠ ಮಾಡಬೇಕಿತ್ತು. ಬೇಸಿಕ್ ಮೊಬೈಲ್ ಸೌಲಭ್ಯ ಇರುವ ವಿದ್ಯಾರ್ಥಿಗಳು, ಇವರಿಗೆ ದೂರವಾಣಿ ಮೂಲಕ ಶಿಕ್ಷಕರು ಪಾಠ ಮಾಡಬಹುದಿತ್ತು. ಮೂರನೇ ಗುಂಪಿನಲ್ಲಿ ಸ್ಮಾರ್ಟ್ ಪೋನ್ ಹೊಂದಿರುವ ವಿದ್ಯಾರ್ಥಿಗಳು, ಇವರಿಗೆ ಅನ್‍ಲೈನ್ ಕ್ಲಾಸ್ ಮಾಡಬಹುದಿತ್ತು.
ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಸೇತುಬಂಧ ಕಾರ್ಯಕ್ರಮದಲ್ಲಿನ ತರಗತಿಗಳ ಬಗ್ಗೆ ಗೊಂದಲ ಇದ್ದವರು ಮನೆಗೆ ಬರುವ ಶಿಕ್ಷಕರು ಬಗೆಹರಿಸಬಹುದಿತ್ತು
ವಿದ್ಯಾಗಮ ಜಾರಿಗೆ ಮೊದಲು ಸರ್ಕಾರ ಏನು ಮಾಡಬೇಕಿತ್ತು?
* ಆಯಾ ಗ್ರಾಮಗಳಲ್ಲಿ ಸೂಕ್ತವಾದ ವಿಶಾಲ ಸ್ಥಳಗಳನ್ನು ಗುರುತಿಸಬೇಕಿತ್ತು
* ಶಾಲೆಗಳಲ್ಲಿ ಪಾಠ ಮಾಡಬಾರದು ಅಂತ ನಿಯಮವಿದ್ದರೂ ಶಾಲೆಯ ಹೊರಗೆ ಕೂರಿಸಿ ಕೆಲವೆಡೆ ಪಾಠ
* ಎಲ್ಲ ಗ್ರಾಮಗಳಲ್ಲೂ ಖಾಲಿ ಮನೆ, ಸಮುದಾಯ ಭವನ, ಸೂಕ್ತ ಸ್ಥಳ ಇದೆಯಾ ಎಂಬ ಸರ್ವೇ ಮಾಡಿಸಬೇಕಿತ್ತು
* ಎಸ್ ಡಿಎಂಸಿ ಅಧ್ಯಕ್ಷರು, ಪೋಷಕರ ನೇತೃತ್ವದಲ್ಲಿ ಸರ್ವೇ ನಡೆಸಿ ಬಳಿಕ ಸಲಹೆಯ ಆಧಾರದ ಮೇಲೆ ವಿದ್ಯಾಗಮ ಜಾರಿ ಮಾಡಬೇಕಿತ್ತು
* ವಿದ್ಯಾಗಮಕ್ಕೆ ತೆರಳುವ ಶಿಕ್ಷಕರಿಗೆ ನಾಲ್ಕು ದಿನಕ್ಕೆ ಒಂದು ಬಾರಿ ಉಚಿತ ಕೊರೊನಾ ತಪಾಸಣೆ ಸೌಲಭ್ಯ ನೀಡಬೇಕಿತ್ತು
* ವಿದ್ಯಾಗಮಕ್ಕೆ ತೆರಳುವ ಶಿಕ್ಷಕರಿಗೆ ಸಾಮಾಜಿಕ ಅಂತರದಡಿ ಸಾರಿಗೆ ವ್ಯವಸ್ಥೆ ಮಾಡಬೇಕಿತ್ತು
* ಸೇತುಬಂಧ ಕಾರ್ಯಕ್ರಮ ವೀಕ್ಷಣೆಗೆ ಹಲವು ಗ್ರಾಮಗಳಲ್ಲಿ ಸಮರ್ಪಕ ವಿದ್ಯುತ್ ನೀಡಬೇಕಿತ್ತು
* ಆನ್‍ಲೈನ್ ವಂಚಿತ ಮಕ್ಕಳು ಎನ್ನುವ ಸರ್ಕಾರಕ್ಕೆ ಉಚಿತ ಲ್ಯಾಪ್‍ಟಾಪ್ ಮಾದರಿಯಲ್ಲಿ ಉಚಿತ ಸ್ಮಾರ್ಟ್ ಫೋನ್ ಕೊಡಿಸಬೇಕಿತ್ತು
* ಯಾವುದೇ ಸಿದ್ಧತೆ, ಮುಂದಾಲೋಚನೆ ಇಲ್ಲದೆ ವಿದ್ಯಾಗಮ ಆರಂಭಿಸಬಾರದಿತ್ತು
* ಜೀವ ಮೊದಲು, ಶಿಕ್ಷಣ ನಂತರ ಎಂಬ ಪರಿಜ್ಞಾನ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಇರಬೇಕಿತ್ತು