ಬೆಂಗಳೂರು: ಎಲ್‍ಕೆಜಿ, ಯುಕೆಜಿ ಹಾಗೂ ಸಿಬಿಎಸ್‍ಸಿ ಸೇರಿದಂತೆ ಎಲ್ಲಾ ಮಾದರಿಯ ಶಾಲೆಗಳ 1ರಿಂದ 5ನೇ ತರಗತಿವರೆಗೂ ಆನ್‍ಲೈನ್ ಕ್ಲಾಸ್ ರದ್ದುಗೊಳಿಸಿ ಸರ್ಕಾರ ಮಹತ್ವದ ಆದೇಶ ನೀಡಿದೆ.
‘ಪಬ್ಲಿಕ್ ಟಿವಿ’ ಕಳೆದ ಒಂದು ವಾರದಿಂದ ಆಲ್‍ಲೈನ್ ಕ್ಲಾಸ್ ಸಮಸ್ಯೆಯ ಕುರಿತು ವಿಸ್ತೃತ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿ ನಿರ್ಧಾರ ಪ್ರಕಟಿಸಿದ್ದಾರೆ.
Advertisement
Advertisement
ಆನ್‍ಲೈನ್ ತರಗತಿ ರದ್ದುಗೊಳಿಸುವ ವಿಚಾರವಾಗಿ ಪಬ್ಲಿಕ್ ಟಿವಿ ಅಭಿಯಾನ ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಸುರೇಶ್ ಕುಮಾರ್ ಅವರು ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಮಗ್ರ ಶಿಕ್ಷಣ ಕಚೇರಿಯಲ್ಲಿ ಇಲಾಖೆಯ ಅಧಿಕಾರಿಗಳು, ತಜ್ಞರು, ಖಾಸಗಿ ಶಾಲೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದರು.
Advertisement
ಸಭೆಯಲ್ಲಿ ಸಚಿವ ಸುರೇಶ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್, ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಮಗ್ರ ಶಿಕ್ಷಣ ಇಲಾಖೆ ನಿರ್ದೇಶಕ ರಿಜು, ಶಿಕ್ಷಣ ತಜ್ಞರು, ಚಿಂತಕ ಗುರುರಾಜ ಕರ್ಜಗಿ, ಶಿಕ್ಷಣ ತಜ್ಞರು ನಿರಂಜನ ಆರಾಧ್ಯ, ನಿಮ್ಹಾನ್ಸ್ ತಜ್ಞ ವೈದ್ಯರು ಹಾಗೂ ಖಾಸಗಿ ಶಾಲೆಗಳ ಸಂಘಟನೆ ಒಕ್ಕೂಟ (ಕ್ಯಾಮ್ಸ್) ಸಂಘಟನೆಯ ಕಾರ್ಯದರ್ಶಿ ಶಶಿಕುಮಾರ್ ಭಾಗವಹಿಸಿದ್ದರು.
Advertisement
ಆನ್‍ಲೈನ್ ಕ್ಲಾಸ್‍ಗಳು ಮಕ್ಕಳ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪಬ್ಲಿಕ್ ಟಿವಿ ಸ್ಪಷ್ಟಪಡಿಸಿತ್ತು. ಈ ಹಿಂದೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಬಂದಲ್ಲಿ ಹೋದಲ್ಲಿ, ಎಲ್‍ಕೆಜಿ, ಯುಕೆಜಿಗೆ ಆನ್‍ಲೈನ್ ಶಿಕ್ಷಣ ಒಳಿತಲ್ಲ. ಪ್ರಾಥಮಿಕ ಶಾಲಾ ಮಕ್ಕಳಿಗೂ ಇದು ಅಪಾಯಕಾರಿ. ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು. ಆದರೆ ಖಾಸಗಿ ಶಾಲೆಗಳು ನಡೆಸುತ್ತಿರುವ ಆನ್‍ಲೈನ್ ಕ್ಲಾಸ್‍ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ.
ಪೋಷಕರಿಂದ ಭಾರೀ ದೂರುಗಳು ಬಂದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಎಳೆಯ ಕಂದಮ್ಮಗಳ ಮೇಲೆ ಹೇರಲಾಗುತ್ತಿರುವ ಆನ್‍ಲೈನ್ ತರಗತಿಯ ವಿರುದ್ಧ ಮಹಾ ಅಭಿಯಾನ ಆರಂಭಿಸಿತ್ತು. ಈ ಅಭಿಯಾನಕ್ಕೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ತಜ್ಞರು, ಸಿನಿಮಾ ಕಲಾವಿರು ಸಾಥ್ ನೀಡಿದ್ದರು.
ಆನ್‍ಲೈನ್ ಕ್ಲಾಸ್ ಏನು? ಎತ್ತ?
1-5 ನೇ ತರಗತಿ ಮಕ್ಕಳಿಗೆ ದಿನಕ್ಕೆ 2 ಅವಧಿಯಲ್ಲಿ ಆನ್‍ಲೈನ್ ಕ್ಲಾಸ್ ನಡೆಯುತ್ತಿದೆ. ಬಹುತೇಕ ಶಾಲೆಗಳಲ್ಲಿ 9 ಗಂಟೆಯಿಂದ ಆನ್‍ಲೈನ್ ಕ್ಲಾಸ್ ಪ್ರಾರಂಭವಾದರೆ ಕೆಲವು ಶಾಲೆಗಳಲ್ಲಿ ಬೆಳಗ್ಗೆ 8 ರಿಂದಲೇ ಆನ್‍ಲೈನ್ ಕ್ಲಾಸ್ ಶುರುವಾಗುತ್ತಿದೆ. ಮಧ್ಯಾಹ್ನ 3 ರಿಂದ 4, 4 ರಿಂದ 5 ಗಂಟೆಗೆ ಮತ್ತೆ ತರಗತಿ ನಡೆಯುತ್ತಿದೆ.
ಆನ್‍ಲೈನ್ ಕ್ಲಾಸ್‍ಗೆ ಮೊಬೈಲ್, ಲ್ಯಾಪ್ ಟ್ಯಾಬ್, ಟ್ಯಾಬ್, ಕಂಪ್ಯೂಟರ್ ಪೈಕಿ ಒಂದು ವಸ್ತು ಇರಬೇಕು. ಆನ್‍ಲೈನ್ ಕ್ಲಾಸ್ ಹಾಜರಾಗಲು ಇಂಟರ್ನೆಟ್ ಸೌಲಭ್ಯ ಇರಬೇಕು. ಆನ್‍ಲೈನ್ ತರಗತಿ ಆರಂಭಕ್ಕೆ 10 ನಿಮಿಷ ಮೊದಲು ವಿದ್ಯಾರ್ಥಿಗೆ ಪಾಸ್‍ವರ್ಡ್ ರವಾನೆಯಾಗುತ್ತದೆ. ಆ ಪಾಸ್‍ವರ್ಡ್ ಮೂಲಕ ವಿದ್ಯಾರ್ಥಿ ಲಾಗಿನ್ ಆಗಿ ಪಾಠ ಕೇಳಬೇಕು. ಬಹುತೇಕ ಟೀಚರ್‍ಗಳಿಗೆ ಪಾಠ ಮಾಡುವ ಸೌಲಭ್ಯ ಇರುತ್ತದೆ.
ಶಿಕ್ಷೆ ಹೇಗೆ?
ಆನ್‍ಲೈನ್ ಕ್ಲಾಸ್‍ನಿಂದ ಮಕ್ಕಳ ಶೋಷಣೆಯಾಗುತ್ತಿದೆ. 1-5 ತರಗತಿವರೆಗಿನ ಮಕ್ಕಳಿಗೆ ಆನ್‍ಲೈನ್ ಪಾಠ ಅರ್ಥ ಆಗುವುದಿಲ್ಲ. ಶಿಕ್ಷಕರು ಪಾಠ ಮಾಡೋದು ಬಹುತೇಕ ಮಕ್ಕಳಿಗೆ ಅರ್ಥವೇ ಆಗುತ್ತಿಲ್ಲ. ಈ ವಯಸ್ಸಿನ ಮಕ್ಕಳು ಆನ್‍ಕ್ಲಾಸ್‍ಗೆ ಗಮನ ನೀಡಲು ಸಾಧ್ಯವಿಲ್ಲ. ಆನ್‍ಲೈನ್ ಕ್ಲಾಸ್‍ನಲ್ಲಿ ಚಿತ್ರಗಳನ್ನು ತೋರಿಸಿದಾಗ ಮಾತ್ರ ಮಕ್ಕಳಿಂದ ಪ್ರತಿಕ್ರಿಯೆ ಸಿಗುತ್ತದೆ. ಉಳಿದ ವೇಳೆ ಆನ್‍ಲೈನ್ ಕ್ಲಾಸ್ ಎಂಬುದು ಮಕ್ಕಳಿಗೆ ಮೊಬೈಲ್, ಟ್ಯಾಬ್, ಲ್ಯಾಪ್ ಆಟದ ವಸ್ತು. ಆನ್‍ಲೈನ್ ಪಾಠ ಪ್ರಾರಂಭ ಹೇಗೆ ಮಾಡ್ತಾರೆ ಅನ್ನೋದೆ ಮಕ್ಕಳಿಗೆ ಗೊತ್ತಿಲ್ಲ. ಪೋಷಕರು ಮಗುವಿನ ಪಕ್ಕ ಕುಳಿತು ಮೊಬೈಲ್, ಟ್ಯಾಬ್ ಆನ್ ಮಾಡಿಕೊಡಬೇಕು. ಪೋಷಕರು ಕ್ಲಾಸ್ ಕೇಳಿಸಿಕೊಂಡು ಹೇಳಿದರೆ ಮಾತ್ರ ಮಕ್ಕಳಿಂದ ಪ್ರತಿಕ್ರಿಯೆ ಬರುತ್ತದೆ.
ಆನ್‍ಲೈನ್ ‘ಶಿಕ್ಷೆ’ಣ ಬೇಡ ಯಾಕೆ?
ಶಿಕ್ಷಣ ತಜ್ಞರು, ಮನಃಶಾಸ್ತ್ರಜ್ಞರ ಪ್ರಕಾರ ಈ ವಯಸ್ಸು ಸೂಕ್ಷ್ಮ ವಯಸ್ಸು. 10ರೊಳಗಿನ ಮಕ್ಕಳಿಗೆ ಆನ್ ಲೈನ್ ತರಗತಿ ಅಗತ್ಯವೇ ಇಲ್ಲ. ಆಟ ಆಡುವ ವಯಸ್ಸಿನ ಮಕ್ಕಳಿಗೆ ಇದು ಕಿರುಕುಳ ನೀಡಿದಂತಾಗುತ್ತದೆ. ಆನ್‍ಲೈನ್ ಪಾಠವನ್ನು ಗ್ರಹಿಸಲು ಮಕ್ಕಳಿಗೆ ಕಷ್ಟ ಆಗುತ್ತದೆ. ಶಾಲೆಯಲ್ಲಿ ಪ್ರತಿ ಮಗುವಿನ ಮೇಲೆ ಶಿಕ್ಷಕರು ಗಮನ ಕೊಡ್ತಾರೆ. ಆದರೆ ಆನ್‍ಲೈನ್‍ನಲ್ಲಿ ಇದು ಅಸಾಧ್ಯ. ಹೀಗಾಗಿ ಮಗುವಿಗೆ ಪಾಠವೇ ಅರ್ಥ ಆಗುವುದಿಲ್ಲ. ಇದು ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತದೆ.
ಮಕ್ಕಳ ಮೇಲೆ ಆಗೋ ಪರಿಣಾಮ ಏನು?
ಆನ್‍ಲೈನ್ ಕಲಿಕೆಯಿಂದ ಅನೇಕ ಗೊಂದಲ, ಸಮಸ್ಯೆ ಸೃಷ್ಟಿಯಾಗಿದೆ. ಆನ್‍ಲೈನ್ ಕ್ಲಾಸ್‍ಗೆ ಇಂಟರ್‍ನೆಟ್ ಸೌಲಭ್ಯ ಬೇಕೆಬೇಕು. ಆನ್‍ಲೈನ್ ಕ್ಲಾಸ್ ವೇಳೆ ಮಕ್ಕಳು ಕೈ ತಪ್ಪಿ ಬೇರೆ ಲಿಂಕ್ ಒತ್ತುವ ಸಾಧ್ಯತೆಯಿದೆ. ಅಶ್ಲೀಲ ವಿಡಿಯೋ ಸೇರಿದಂತೆ ಇನ್ನಿತರ ಲಿಂಕ್ ಓಪನ್ ಆಗಬಹುದು. ಇವು ಮಕ್ಕಳನ್ನ ಬೇರೆ ಹಾದಿಗೆ ತೆಗೆದುಕೊಂಡು ಹೋಗುವ ಸಾಧ್ಯತೆ ಹೆಚ್ಚಿದೆ. ಈ ವಯಸ್ಸಿನಲ್ಲೇ ಮೊಬೈಲ್, ಟ್ಯಾಬ್, ಲ್ಯಾಪ್‍ನಂತಹ ಪರಿಕರಗಳಿಗೆ ಅಡಿಕ್ಟ್ ಆಗೋ ಸಾಧ್ಯತೆ ಹೆಚ್ಚಿದೆ.
ಆರೋಗ್ಯದ ಮೇಲೆ ಏನಾಗುತ್ತೆ?
ಪದೇ ಪದೇ ಮಗು ಮೊಬೈಲ್, ಕಂಪ್ಯೂಟರ್ ನೋಡ್ತಿದ್ರೆ ಕಣ್ಣಿನ ಮೇಲೆ ಪರಿಣಾಮ ಬೀಳುತ್ತದೆ. ಆನ್‍ಲೈನ್ ಕ್ಲಾಸ್ ಒತ್ತಡದಿಂದ ಮಕ್ಕಳ ಮೆದುಳಿನ ಮೇಲೂ ಅಡ್ಡ ಪರಿಣಾಮವಾಗುತ್ತದೆ. ಆನ್‍ಲೈನ್ ಪಾಠ ಅರ್ಥ ಆಗದೇ, ಮಕ್ಕಳಿಗೆ ಕೋಪ, ಆವೇಶ, ಸಿಟ್ಟು ಬರಬಹುದು. ಪುಟ್ಟ ಪುಟ್ಟ ಮಕ್ಕಳು ಮಾನಸಿಕ ಖಿನ್ನತೆಗೆ ತುತ್ತಾಗಬಹುದು. ಪೋಷಕರು, ಶಿಕ್ಷರ ಮಾತು ಕೇಳದೇ ವಿಚಿತ್ರವಾಗಿ ವರ್ತಿಸಬಹುದು.
ಪೋಷಕರಿಗೆ ಆನ್‍ಲೈನ್ ‘ಶಿಕ್ಷೆ’..!
ಆನ್‍ಲೈನ್ ಕ್ಲಾಸ್‍ಗಳಿಂದ ಕೇವಲ ಮಕ್ಕಳಿಗೆ ಅಷ್ಟೇ ಅಲ್ಲ, ಪೋಷಕರಿಗೂ ತೊಂದರೆ ಆರಂಭವಾಗಿದೆ. ಇರುವ ಎಲ್ಲಾ ಕೆಲಸ ಕಾರ್ಯ ಬಿಟ್ಟು ಮಕ್ಕಳ ಮುಂದೆ ಕ್ಲಾಸ್ ಮುಗಿಯುವರೆಗೂ ಇರಬೇಕು. ಮಕ್ಕಳು ಮೊಬೈಲ್‍ನಲ್ಲಿ ಏನೇನು ಓಪನ್ ಮಾಡ್ತಾರೋ ಎಂಬ ಭಯ. ಆನ್‍ಲೈನ್ ಕ್ಲಾಸ್ ವೇಲೆ ಬೇರೆ ಯಾವುದೇ ಕೆಲಸ ಮಾಡಿಕೊಳ್ಳಲು ಸಾಧ್ಯವಿಲ್ಲ. ಎಲ್ಲರ ಮನೆಗಳಲ್ಲಿಯೂ ಎರಡೆರಡು, ಮೂರುಮೂರು ಮೊಬೈಲ್ ಇರಲ್ಲ (ಇದ್ದರೂ ಇಂಟರ್ನೆಟ್ ಸೌಲಭ್ಯ ಎಲ್ಲಾ ಮೊಬೈಲ್‍ಗಳಿಗೂ ಇರಲ್ಲ).
ಈ ಹಿಂದೆ ಆಫೀಸಿಗೆ ತೆರಳಿದ್ದಾಗ ಮನೆಯಲ್ಲಿ ಮಕ್ಕಳನ್ನು ಹಿರಿಯರು ನೋಡುತ್ತಿದ್ದರು. ಆದರೆ ಈಗ ಅವರಿಗೆ ಕಂಪ್ಯೂಟರ್/ ಮೊಬೈಲ್ ಆಪರೇಟಿಂಗ್ ಮಾಡಲು ಬರುವುದಿಲ್ಲ. ಹೀಗಾಗಿ ಪೋಷಕರೇ ಮನೆಯಲ್ಲಿ ಇರಬೇಕಾಗುತ್ತದೆ. ಇದರಿಂದಾಗಿ ಸರಿಯಾದ ಸಮಯಕ್ಕೆ ಕಂಪನಿ/ ಕಾರ್ಖಾನೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆಫೀಸ್‍ನಲ್ಲಿ/ಕಾರ್ಖಾನೆಗಳಲ್ಲಿ ಲೇಟಾದ್ರೆ ಅಲ್ಲೂ ಬೈಸಿಕೊಳ್ಳಬೇಕು. ಆನ್‍ಲೈನ್ ಕ್ಲಾಸ್ ಹೆಸರೇಳಿ ಪೋಷಕರಿಂದ ದುಬಾರಿ ಶುಲ್ಕ ವಸೂಲಿಯಾಗುತ್ತಿದೆ. ಟ್ಯಾಬ್, ಲ್ಯಾಪ್‍ಟಾಪ್ ತೆಗೆದುಕೊಳ್ಳಿ ಅಂತ ಆಡಳಿತ ಮಂಡಳಿಗಳಿಂದ ಒತ್ತಡ. ಅವಿದ್ಯಾವಂತ ತಂದೆ-ತಾಯಿಯರಿಗೆ ಆನ್‍ಲೈನ್ ಶಿಕ್ಷಣ ಎಂಬುದು ನರಕಯಾತನೆಯಾಗಿದೆ.